ನ್ಯಾಯಾಧೀಶರ ಕೊರತೆಯಿಂದ ಪ್ರಕರಣಗಳ ವಿಲೇವಾರಿ ವಿಳಂಬ: ನ್ಯಾ. ಎಸ್‌.ಆರ್‌. ಬನ್ನೂರು ಮಠ

| Published : Dec 03 2024, 12:31 AM IST

ನ್ಯಾಯಾಧೀಶರ ಕೊರತೆಯಿಂದ ಪ್ರಕರಣಗಳ ವಿಲೇವಾರಿ ವಿಳಂಬ: ನ್ಯಾ. ಎಸ್‌.ಆರ್‌. ಬನ್ನೂರು ಮಠ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಾಚಾರಗಳು, ಶೋಷಣೆ ತಡೆಯಲು ಕಠಿಣ ಕಾನೂನು ಜಾರಿಯಲ್ಲಿವೆ. ಆದರೆ, ಪಶು ವೃತ್ತಿಯ ಮನಸ್ಸು, ಕೃತ್ಯವೆಸಗಿ ತಪ್ಪಿಸಿಕೊಳ್ಳುತ್ತೇನೆ ಎನ್ನುವ ವರ್ಗದಿಂದ ಮಹಿಳೆಯ ಮೇಲೆ ದೌರ್ಜನ್ಯಗಳಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಮೂರ್ತಿಗಳ ಕೊರತೆ ಇರುವುದರಿಂದ ತ್ವರಿತ ಗತಿಯಲ್ಲಿ ಪ್ರಕರಣಗಳು ವಿಲೇವಾರಿ ಆಗುತ್ತಿಲ್ಲ ಎಂದು ಕೇರಳ ಹೈ ಕೋರ್ಟ್‌ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಆರ್‌. ಬನ್ನೂರು ಮಠ ಹೇಳಿದರು.

ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನ ಸಿಲ್ವರ್ ಜ್ಯೂಬಿಲಿ ಸಭಾಂಗಣದಲ್ಲಿ ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ಮಹಿಳೆ ಮತ್ತು ಕಾನೂನು ಚಿಂತನೆ ಸಂವಾದದಲ್ಲಿ ತ್ವರಿತಗತಿಯ ನ್ಯಾಯದಾನ ಮಾಡಲು ಇರುವ ತೊಡಕುಗಳೇನು ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಆಮೆರಿಕಾದಲ್ಲಿ 10 ಲಕ್ಷ ಜನರಿಗೆ 88 ಮಂದಿ ನ್ಯಾಯಾಧೀಶರಿದ್ದಾರೆ. ಆದ್ದರಿಂದ ಅಲ್ಲಿ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಆಗುತ್ತವೆ. ಆದರೆ ಸುಪ್ರಿಂ ಕೋರ್ಟ್‌ನ ನಿಯಮ ಮತ್ತು ದೇಶದ ಕಾನೂನಿನ ಪ್ರಕಾರ 10 ಲಕ್ಷ ಜನಕ್ಕೆ 50 ಜನ ನ್ಯಾಯಾಧೀಶರು ಇರಬೇಕು. ಆದರೆ, ದೇಶದಲ್ಲಿ ಇರುವುದು 34 ಮಂದಿ ನ್ಯಾಯಾಧೀಶರಷ್ಟೇ. ನಮ್ಮಲ್ಲಿ ನ್ಯಾಯಾಧೀಶರ ಕೊರತೆಯಿಂದ ತ್ವರಿತವಾಗಿ ನ್ಯಾಯದಾನ ಆಗುತ್ತಿಲ್ಲ ಎಂದರು.

ಕೋರ್ಟು, ಕಚೇರಿಯ ಮೆಟ್ಟಿಲು ಹತ್ತ ಬೇಡಣ್ಣ, ಇಲ್ಲಿ ಸೋತವನು ಸತ್ತ, ಗೆದ್ದವನು ಸೋತ ಎಂಬ ಮಾತಿನಂತೆ ದುಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸುವ ಉದೇಶದಿಂದ ಸಂಧಾನ ಸಮನ್ವಯದ ವಿವಾದ ಪರಿಹಾರ (ಎಡಿಆರ್) ಕೇಂದ್ರವನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಲಾಗಿದೆ. ವಕೀಲರು ಇಲ್ಲದೇ ಎದುರು- ಬದರು ಕುಳಿತುಕೊಂಡು ತಾವಾಗಿಯೇ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಮಾತನಾಡಿ, ಅತ್ಯಾಚಾರಗಳು, ಶೋಷಣೆ ತಡೆಯಲು ಕಠಿಣ ಕಾನೂನು ಜಾರಿಯಲ್ಲಿವೆ. ಆದರೆ, ಪಶು ವೃತ್ತಿಯ ಮನಸ್ಸು, ಕೃತ್ಯವೆಸಗಿ ತಪ್ಪಿಸಿಕೊಳ್ಳುತ್ತೇನೆ ಎನ್ನುವ ವರ್ಗದಿಂದ ಮಹಿಳೆಯ ಮೇಲೆ ದೌರ್ಜನ್ಯಗಳಾಗುತ್ತಿವೆ ಎಂದು ವಿಷಾದಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ, ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಮೊದಲಾದವರು ಇದ್ದರು.