ಹನುಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ನಿರಂತರ ವಿಳಂಬವಾಗುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ರೈತರು, ಹನುಮಸಾಗರದಲ್ಲಿ ಪ್ರತಿಭಟನೆ ನಡೆಸಿದರು.
ಹನುಮಸಾಗರ: ಪಟ್ಟಣದಲ್ಲಿ ಕೃಷ್ಣಾ ಬಿ ಸ್ಕೀಂ ಹಾಗೂ ಕೊಪ್ಪಳ ಏತ ನೀರಾವರಿ ಯೋಜನೆಯಡಿ ಹನುಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ನಿರಂತರ ವಿಳಂಬವಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೆರೆ ತುಂಬಿಸುವ ಕುರಿತು ಹೋರಾಟದಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿರುವುದು ಹನುಮಸಾಗರ. ಆದರೆ ತಾಂತ್ರಿಕ ದೋಷಗಳಿಂದಾಗಿ ಹನುಮಸಾಗರ ವ್ಯಾಪ್ತಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈಗಾಗಲೇ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದುಹೋಗುತ್ತಿರುವ ಆರೋಪಗಳಿವೆ. ನೀರು ವ್ಯರ್ಥವಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ, ಹನುಮಸಾಗರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.ಕುಷ್ಟಗಿ ತಾಲೂಕಿನಲ್ಲಿ ಕೆರೆ ತುಂಬಿಸುವ ಸಂಬಂಧ ಎರಡು ಪ್ರಮುಖ ಕಾಮಗಾರಿಗಳು ನಡೆಯುತ್ತಿದ್ದು, ಸುಮಾರು ₹500 ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಹಾಗೂ ಕೆಬಿಜೆಎನ್‌ಎಲ್ ವ್ಯಾಪ್ತಿಗೆ ಬರುವ ಹನುಮಸಾಗರ ಭಾಗದ ಕೆರೆಗಳನ್ನು ಆದ್ಯತೆಯ ಮೇರೆಗೆ ತುಂಬಿಸಬೇಕು. ಸರ್ಕಾರ ಹಣ ಬಿಡುಗಡೆ ಮಾಡಿದ ಬಳಿಕವೂ ಕಾಮಗಾರಿ ಹಾಗೂ ನೀರು ಹರಿಸುವಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂದರು.ರೈತ ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ರೈತ ಮುಖಂಡ ಸೂಚಪ್ಪ ಭೋವಿ ಮಾತನಾಡಿ, ನೀರನ್ನು ಕೆಲವರು ಅಕ್ರಮವಾಗಿ ತಮ್ಮ ಹೊಲಗಳಿಗೆ ಹರಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕೆರೆಗಳಿಗೆ ನೀರು ತಲುಪುವುದಿಲ್ಲ. ಅಕ್ರಮವಾಗಿ ನೀರು ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ರೈತ ಮುಖಂಡ ವಿಶ್ವನಾಥ ಕನ್ನೂರು ಮಾತನಾಡಿ, ಜಾನುವಾರುಗಳಿಗೆ ಕೂಡ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಬಾಚಲಾಪುರ ಮಾತನಾಡಿ, ಅಧಿಕಾರಿಗಳು ಹಾಗೂ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.ರೈತ ಮುಖಂಡ ಮಹಾಂತೇಶ ಅಗಸಿಮುಂದಿನ, ವಕೀಲ ಮಹಾಂತೇಶ ಕುಷ್ಟಗಿ ಮಾತನಾಡಿದರು.
ಮಾತಿನ ಚಕಮಕಿ:ಪ್ರತಿಭಟನೆಯ ಬಳಿಕ ರೈತ ಮುಖಂಡರು ಹಾಗೂ ಪ್ರಮುಖರು ತಹಸೀಲ್ದಾರ್ ಕಾಂತರಾಜ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ, ಹನುಮಸಾಗರ ವ್ಯಾಪ್ತಿಯ ಕೆರೆಗಳಿಗೆ ತಕ್ಷಣ ನೀರು ಹರಿಸುವಂತೆ ಹಾಗೂ ಕೆರೆ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಮಗಾರಿ ಆರಂಭವಾಗಿ ಹಲವು ವರ್ಷಗಳಾದರೂ ಇನ್ನೂ ಸಂಪೂರ್ಣಗೊಳ್ಳದಿರುವ ಬಗ್ಗೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ಏಕೆ ಕಾಲಹರಣ ಮಾಡಲಾಗುತ್ತಿದೆ? ನಮಗೆ ಯಾವಾಗ ನೀರು ಬಿಡುತ್ತೀರಿ? ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ದೇವೇಂದ್ರಪ್ಪ, ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು.
ಡಿಸೆಂಬರ್ ಒಳಗಾಗಿ ಕೆರೆಗಳಿಗೆ ನೀರು ಹರಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಹಾಗೂ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಹೋಬಳಿ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಜಿಲ್ಲಾಧ್ಯಕ್ಷ ಗಣೇಶರೆಡ್ಡಿ, ಕುಷ್ಟಗಿ ತಾಲೂಕಾಧ್ಯಕ್ಷ ಶರಣಪ್ಪ ಕಮತರ, ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಪ್ಪ ಬಾಚಲಾಪುರ, ಉಮೇಶ ಬಾಚಲಾಪುರ, ಉಪಾಧ್ಯಕ್ಷ ಬಸವರಾಜ ಮೈಟರಿನ, ಇಸ್ಮಾಯಿಲ್‌ಸಾಬ್ ತಹಸೀಲ್ದಾರ್, ರೈತ ಮುಖಂಡರಾದ ದಾಮೋದರ ಹಯಗ್ರೀವ್, ಶಿವಪುತ್ರಪ್ಪ ಕೋಳೂರ, ಹನುಮಂತಪ್ಪ ಹಲಕೂಲಿ, ಚಂದಾಲಿಂಗಪ್ಪ ಕಟಗಿ, ಶರಣಪ್ಪ ಪಲ್ಲೇದ, ಶರಣಪ್ಪ ಹಡಪದ, ರುದ್ರಗೌಡ ಗೌಡಪ್ಪನವರ, ಆರ್.ಕೆ. ದೇಸಾಯಿ, ಅಕ್ಕಮ್ಮ ಮರೇಗೌಡ್ರ, ಸಂಗಮ್ಮ ಕುಳಗೌಡ್ರ, ಶಂಕ್ರಗೌಡ ಪೊಲೀಸ್‌ಪಾಟೀಲ್ ಹಾಗೂ ನೂರಾರು ರೈತರು ಭಾಗವಹಿಸಿದ್ದರು.