ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿ ಖಂಡಿಸಿ ವಕೀಲ ಕಿರಣಕುಮಾರ ಎಂ.ಎಲ್. ಮಂಗಳವಾರ ಚರಂಡಿ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯ, ವಕೀಲ ಕಿರಣಕುಮಾರ ಎಂ.ಎಲ್. ಮಂಗಳವಾರ ಚರಂಡಿ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಪೇಪರ್ ಹಾಸಿಕೊಂಡು ಮಲಗುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಮ್ಮ ತಾಲೂಕಿನ ಆಡಳಿತ ವ್ಯವಸ್ಥೆಯೇ ನಿದ್ರಾವಸ್ಥೆಯಲ್ಲಿದೆ. ಕಳೆದ ಆರು ತಿಂಗಳ ಹಿಂದೆಯೇ ಮುಖ್ಯರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಬೇಕಿತ್ತು. ಆದರೆ, ಇದುವರೆಗೂ ಶೇ.10ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಮುಖ್ಯರಸ್ತೆ ನಿರ್ಮಾಣ ಕಾಮಗಾರಿಯ ಹೊಣೆ ಹೊತ್ತಿರುವ ಎಪಿಎಂಸಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಹಳ್ಳ ಹಿಡಿಯುತ್ತಿದೆ ಎಂದು ಕಿಡಿಕಾರಿದರು.

ಯುಜಿಡಿ ಮುಕ್ತಾಯದ ಹಂತಕ್ಕೆ;ಕಳೆದ ನಾಲ್ಕೈದು ತಿಂಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಯುಜಿಡಿ ಮತ್ತು 24* 7 ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಇದೀಗ ಮುಕ್ತಾಯದ ಹಂತಕ್ಕೆ ತಲುಪುತ್ತಿದೆ. ಆದರೆ, ಸುಮಾರು ಒಂದು ತಿಂಗಳ ಹಿಂದೆ ಆರಂಭವಾದ ಚರಂಡಿ ನಿರ್ಮಾಣ ಕಾಮಗಾರಿ ಮಾತ್ರ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಈವರೆಗೂ ಅಂದಾಜು 50 ಮೀಟರ್ ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂದರು.

6 ಜನ ಕಾರ್ಮಿಕರು ಮಾತ್ರ:ಚರಂಡಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಭಿಯಂತರರು ಸ್ಥಳಕ್ಕೆ ಬಂದು ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ತಲಾ 950 ಮೀಟರ್ ಉದ್ದದ ಚರಂಡಿ ನಿರ್ಮಿಸಬೇಕಿದ್ದು, ಇಷ್ಟೊಂದು ದೊಡ್ಡ ಕಾಮಗಾರಿಗೆ ಗುತ್ತಿಗೆದಾರರು ಕೇವಲ ಆರು ಕಾರ್ಮಿಕರನ್ನು ಮಾತ್ರ ನಿಯೋಜಿಸಿದ್ದಾರೆ. ಇದರಿಂದ ದಿನಕ್ಕೆ ಅಂದಾಜು 15ರಿಂದ 20 ಮೀಟರ್‌ನಷ್ಟು ಮಾತ್ರ ಚರಂಡಿ ನಿರ್ಮಾಣವಾಗುತ್ತಿದೆ. ಇಂತಹ ವೇಗದಲ್ಲಿ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂದು ಪ್ರಶ್ನಿಸಿದರು.

ವಿದ್ಯುತ್ ಕಂಬಗಳ ಸ್ಥಳಾಂತರ ಯಾವಾಗ?:ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯವೂ ಇನ್ನೂ ಆರಂಭವಾಗಿಲ್ಲ. ರಸ್ತೆ ನಿರ್ಮಾಣಕ್ಕೂ ಮುನ್ನ ಟ್ರೆಂಚಿಂಗ್ ಸೇರಿದಂತೆ ಹಲವು ಪೂರ್ವಸಿದ್ಧತಾ ಕೆಲಸಗಳು ಬಾಕಿ ಉಳಿದಿವೆ. ಒಂದೆಡೆ ಕಾಮಗಾರಿ ವಿಳಂಬವಾಗುತ್ತಿದ್ದರೆ, ಮತ್ತೊಂದೆಡೆ ಹದಗೆಟ್ಟ ರಸ್ತೆಯಿಂದ ಉಂಟಾಗುತ್ತಿರುವ ಧೂಳು ಮತ್ತು ವಾಹನಗಳ ಸಂಚಾರದ ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೇನು ಮೆಣಸಿನಕಾಯಿ ಮಾರುಕಟ್ಟೆಯ ಸೀಸನ್ ಆರಂಭವಾಗಲಿದ್ದು, ಪಟ್ಟಣಕ್ಕೆ ನಿತ್ಯವೂ ಸಾವಿರಾರು ವಾಹನಗಳು ಆಗಮಿಸಲಿವೆ. ಇಂತಹ ಸಂದರ್ಭದಲ್ಲಿ ಮುಖ್ಯರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವ ಜನಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ವಾರ ಜಿಲ್ಲಾಧಿಕಾರಿಗಳು ಮುಖ್ಯರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಗೆ ವೇಗ ನೀಡುವಂತೆ ಹಾಗೂ ಗುಣಮಟ್ಟದೊಂದಿಗೆ ನಿಯಮಾನುಸಾರ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಆದರೂ ಎಪಿಎಂಸಿ ಕಾರ್ಯದರ್ಶಿಗಳು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವಲ್ಲಿ ವಿಫಲರಾಗಿರುವುದರಿಂದ ಕಾಮಗಾರಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ಆರೋಪಿಸಿದರು.