ಪಂಚಾಯಿತಿ ಚುನಾವಣೆ ಎನ್ನುವುದು ಕೇವಲ ಗ್ರಾಮ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಗ್ರಾಮೀಣ ಪ್ರದೇಶದ ಸಾಮಾನ್ಯ ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ, ಜನರ ಸಮಸ್ಯೆಗಳನ್ನು ಅರಿತು, ಆಡಳಿತದ ಅನುಭವ ಪಡೆದು ಮುಂದಿನ ಹಂತದ ನಾಯಕತ್ವಕ್ಕೆ ಬೆಳೆಯಲು ದೊರೆಯುವ ಪ್ರಮುಖ ವೇದಿಕೆಯಾಗಿದೆ. ಹೀಗಾಗಿ ಚುನಾವಣೆ ವಿಳಂಬವಾಗುತ್ತಿರುವುದು ‘ಸೆಕೆಂಡ್ ಲೈನ್ ಲೀಡರ್‌ಶಿಪ್’ ಬೆಳವಣಿಗೆಗೂ ಅಡ್ಡಿಯಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದೆ ಇರುವ ಪರಿಣಾಮ ಕೇವಲ ಸ್ಥಳೀಯ ಆಡಳಿತ ವ್ಯವಸ್ಥೆಯ ಮೇಲಷ್ಟೇ ಅಲ್ಲ, ಗ್ರಾಮೀಣ ಅಭಿವೃದ್ಧಿ, ಕೇಂದ್ರದ ಹಣಕಾಸು ಆಯೋಗದ ಅನುದಾನದ ಬಳಕೆ ಹಾಗೂ ತಳಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಸುವ ಪ್ರಕ್ರಿಯೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎ. ಮಂಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು ಸರ್ಕಾರದ ಕರ್ತವ್ಯ. ಚುನಾಯಿತ ಪ್ರತಿನಿಧಿಗಳಿಲ್ಲದೆ ಪಂಚಾಯಿತಿ ರಾಜ್ ವ್ಯವಸ್ಥೆಯ ಮೂಲ ಆಶಯವೇ ದುರ್ಬಲವಾಗುತ್ತದೆ. ಇದರಿಂದ ಜನರ ಹಣ, ಗ್ರಾಮೀಣ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವ ಮೂರಕ್ಕೂ ನಷ್ಟವಾಗಿದೆ. ಪಂಚಾಯಿತಿ ಚುನಾವಣೆ ಎನ್ನುವುದು ಕೇವಲ ಗ್ರಾಮ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಗ್ರಾಮೀಣ ಪ್ರದೇಶದ ಸಾಮಾನ್ಯ ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ, ಜನರ ಸಮಸ್ಯೆಗಳನ್ನು ಅರಿತು, ಆಡಳಿತದ ಅನುಭವ ಪಡೆದು ಮುಂದಿನ ಹಂತದ ನಾಯಕತ್ವಕ್ಕೆ ಬೆಳೆಯಲು ದೊರೆಯುವ ಪ್ರಮುಖ ವೇದಿಕೆಯಾಗಿದೆ. ಹೀಗಾಗಿ ಚುನಾವಣೆ ವಿಳಂಬವಾಗುತ್ತಿರುವುದು ‘ಸೆಕೆಂಡ್ ಲೈನ್ ಲೀಡರ್‌ಶಿಪ್’ ಬೆಳವಣಿಗೆಗೂ ಅಡ್ಡಿಯಾಗುತ್ತಿದೆ ಎಂದರು.

ಭಾರತದ ಸಂವಿಧಾನದ ೭೩ನೇ ತಿದ್ದುಪಡಿಯ ಮೂಲಕ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ಅಧಿಕಾರ ವಿಕೇಂದ್ರೀಕರಣ, ಜನರ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆ ರೂಪಿಸುವುದು ಇದರ ಪ್ರಮುಖ ಆಶಯವಾಗಿದೆ. ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಎಂಬ ಮೂರು ಹಂತದ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಮೀಣ ಜನರ ಸಮಸ್ಯೆಗಳನ್ನು ಅವರಿರುವ ಸ್ಥಳದಲ್ಲಿಯೇ ಗುರುತಿಸಿ ಪರಿಹರಿಸುವುದು ಹಾಗೂ ಅಭಿವೃದ್ಧಿಯ ನಿರ್ಧಾರಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳಿಲ್ಲದೆ ಪಂಚಾಯಿತಿ ವ್ಯವಸ್ಥೆ ಮುಂದುವರಿದರೆ, ಜನರ ನೇರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತದೆ. ಅಧಿಕಾರಿಗಳು ತಮ್ಮ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಬಹುದಾದರೂ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಮಾತ್ರ ಜನರ ಆಶಯವನ್ನು ನೇರವಾಗಿ ಪ್ರತಿಬಿಂಬಿಸಲು ಸಾಧ್ಯ ಎಂದು ಅವರು ಹೇಳಿದರು.ಹೀಗಾಗಿ ಕೇಂದ್ರದಿಂದ ಬರುವ ಹಣಕಾಸು ಆಯೋಗದ ಅನುದಾನವನ್ನು ಕೇವಲ ಲೆಕ್ಕಪತ್ರದಲ್ಲಿ ತೋರಿಸುವುದಕ್ಕಿಂತ, ಅದರ ಸಂಪೂರ್ಣ ಪ್ರಯೋಜನ ಗ್ರಾಮೀಣ ಜನರಿಗೆ ತಲುಪುವಂತೆ ಮಾಡಬೇಕು. ಈಗಾಗಲೇ ಬಿಡುಗಡೆಯಾಗಿರುವ ಅನುದಾನ, ಬಳಕೆಯಾದ ಮೊತ್ತ ಹಾಗೂ ಬಾಕಿ ಉಳಿದಿರುವ ಹಣದ ಕುರಿತು ಸಮಗ್ರ ಲೆಕ್ಕಪತ್ರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗುವ ಪ್ರತಿಯೊಂದು ರೂಪಾಯಿಯೂ ಸಾರ್ವಜನಿಕರ ಹಣ. ಹೀಗಾಗಿ ಆ ಹಣ ಯಾವ ಕಾಮಗಾರಿಗೆ ಬಿಡುಗಡೆಯಾಯಿತು, ಕಾಮಗಾರಿ ಪೂರ್ಣಗೊಂಡಿದೆಯೇ, ಗುಣಮಟ್ಟ ಹೇಗಿದೆ, ಹಣ ಸಂಪೂರ್ಣವಾಗಿ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಪಾರದರ್ಶಕತೆ ಇರಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಲೋಪ, ಹಣದ ದುರುಪಯೋಗ ಅಥವಾ ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಆರಂಭವಾಗುವ ಸಾರ್ವಜನಿಕ ಜೀವನವೇ ಮುಂದಿನ ಹಂತದಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತದೆ. ಗ್ರಾಮೀಣ ಭಾಗದ ಯುವಕರು ಹಾಗೂ ಸಾಮಾನ್ಯ ಕಾರ್ಯಕರ್ತರು ಜನರೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶವನ್ನು ಪಂಚಾಯಿತಿ ವ್ಯವಸ್ಥೆ ಒದಗಿಸುತ್ತದೆ.ಪಂಚಾಯಿತಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸುವುದು, ಸಭೆಗಳಲ್ಲಿ ಚರ್ಚಿಸುವುದು, ಅಭಿವೃದ್ಧಿ ಯೋಜನೆ ರೂಪಿಸುವುದು ಹಾಗೂ ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಅನುಭವವೇ ಮುಂದಿನ ಹಂತದ ನಾಯಕತ್ವಕ್ಕೆ ಬುನಾದಿಯಾಗುತ್ತದೆ. ಆದ್ದರಿಂದ ಪಂಚಾಯಿತಿ ಚುನಾವಣೆಗಳು ಪ್ರಜಾಪ್ರಭುತ್ವದ ‘ತರಬೇತಿ ಶಾಲೆ’ಯಂತಿವೆ ಎಂದು ಅವರು ಅಭಿಪ್ರಾಯಪಟ್ಟರು. ಚುನಾವಣೆ ವಿಳಂಬದಿಂದ ಈ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ಹೊಸ ನಾಯಕತ್ವ ಬೆಳೆಯಬೇಕಾದರೆ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಯಲೇಬೇಕು ಎಂದರು. ಚುನಾಯಿತ ಸಂಸ್ಥೆಗಳ ಅವಧಿ ಮುಗಿದ ಬಳಿಕ ಆಡಳಿತಾತ್ಮಕವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಬಹುದು. ಆದರೆ ಅದು ದೀರ್ಘಕಾಲದ ಪರ್ಯಾಯ ವ್ಯವಸ್ಥೆಯಾಗಬಾರದು. ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ದೃಷ್ಟಿಕೋನದಿಂದ ನೋಡಿದರೆ, ಜನಪ್ರತಿನಿಧಿಗಳು ಜನರ ಅನುಭವ ಮತ್ತು ಅಗತ್ಯಗಳ ಆಧಾರದ ಮೇಲೆ ಸಮಸ್ಯೆಗಳನ್ನು ಮುಂದಿಡುತ್ತಾರೆ. ಈ ಎರಡೂ ವ್ಯವಸ್ಥೆಗಳು ಪರಸ್ಪರ ಪೂರಕವಾಗಬೇಕು. ಆದರೆ ಚುನಾಯಿತ ವ್ಯವಸ್ಥೆಯನ್ನೇ ಬದಲಿಸುವ ರೀತಿಯಲ್ಲಿ ಅಧಿಕಾರಿಗಳ ಆಡಳಿತ ಮುಂದುವರಿಯಬಾರದು ಎಂದು ಹೇಳಿದರು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ತಕ್ಷಣ ಚುನಾವಣೆ ನಡೆಸಬೇಕು. ಚುನಾಯಿತ ಪ್ರತಿನಿಧಿಗಳ ಮೂಲಕ ಸ್ಥಳೀಯ ಆಡಳಿತವನ್ನು ಪುನಃ ಸ್ಥಾಪಿಸಬೇಕು. ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ಹಣಕಾಸು ಆಯೋಗದ ಅನುದಾನಗಳ ಕುರಿತು ಸಂಪೂರ್ಣ ಲೆಕ್ಕಪತ್ರ ಪರಿಶೀಲನೆ ನಡೆಸಿ, ಹಣ ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಲೋಪ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎ. ಮಂಜು ಆಗ್ರಹಿಸಿದರು. ಚುನಾವಣೆ ಎಂದರೆ ಅಧಿಕಾರಕ್ಕಾಗಿ ನಡೆಯುವ ಪ್ರಕ್ರಿಯೆ ಮಾತ್ರವಲ್ಲ. ಅದು ಜನರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು. ಪಂಚಾಯಿತಿ ಎಂದರೆ ಕೇವಲ ಕಟ್ಟಡವಲ್ಲ; ಅದು ಗ್ರಾಮೀಣ ಪ್ರಜಾಪ್ರಭುತ್ವದ ಜೀವಾಳ. ಈ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮ ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ " ಎಂದು ಅವರು ಹೇಳಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತ್ತಷ್ಟು ವಿಳಂಬ ಮಾಡದೆ ನಡೆಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ವೇಗ ನೀಡುವುದರ ಜತೆಗೆ, ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ತಳಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ನೀರಿನ ವಿಚಾರದಲ್ಲೂ ಜಿಲ್ಲೆಯ ಹಿತ ಮೊದಲು

ಹಾಸನ ಜಿಲ್ಲೆಯ ನೀರಾವರಿ ವಿಚಾರವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿ, ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹಲವು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಕ್ರಮಗಳು ಹಾಗೂ ಸ್ಥಳೀಯ ರೈತರ ಅಗತ್ಯಗಳನ್ನು ಪರಿಗಣಿಸಬೇಕು. ಹೈಲೆವೆಲ್ ಕಾಲುವೆ ಸೇರಿದಂತೆ ನೀರಾವರಿ ವ್ಯವಸ್ಥೆಯಲ್ಲಿ ನೀರು ಹರಿಸುವಾಗ ಜಿಲ್ಲೆಯ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದರು. ಒಂದು ಪ್ರದೇಶದ ಅಗತ್ಯವನ್ನು ಕಡೆಗಣಿಸಿ ಮತ್ತೊಂದು ಪ್ರದೇಶಕ್ಕೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬಾರದು. ನೀರಿನ ಹಂಚಿಕೆಯಲ್ಲಿ ವೈಜ್ಞಾನಿಕತೆ, ಪಾರದರ್ಶಕತೆ ಹಾಗೂ ನ್ಯಾಯಸಮ್ಮತವಾದ ಕ್ರಮ ಇರಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿದರೆಕೆರೆ ಜಯರಾಮ್, ನಗರಸಭೆ ಮಾಜಿ ಸದಸ್ಯ ಕಮಲ್ ಕುಮಾರ್, ಕ್ರಾಂತಿ ಪ್ರಸಾದ್ ತ್ಯಾಗಿ, ರವಿಶಂಕರ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್, ಬಾಲಸುಬ್ರಹ್ಮಣ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.===*ಬಾಕ್ಸ್‌:: ಅನುದಾನ ಬಂದರೂ ಜನರಿಗೆ ತಲುಪದ ಪರಿಸ್ಥಿತಿಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗುವ ಹಣವನ್ನು ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ನೈರ್ಮಲ್ಯ, ನೀರು ಸಂಗ್ರಹಣೆ ಸೇರಿದಂತೆ ಹತ್ತಾರು ಮೂಲಭೂತ ಸಮಸ್ಯೆಗಳಿಗೆ ಈ ಹಣ ಬಳಕೆಯಾಗಬೇಕಿದೆ. ಆದರೆ ಪಂಚಾಯಿತಿಗಳಿಗೆ ಚುನಾವಣೆ ನಡೆಯದೆ ಇರುವುದರಿಂದ ಅನುದಾನದ ಬಳಕೆ ಹಾಗೂ ಆದ್ಯತೆ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಇಲ್ಲದಂತಾಗಿದೆ. ಯಾವ ಗ್ರಾಮಕ್ಕೆ ಮೊದಲು ರಸ್ತೆ ಬೇಕು, ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಯಾವ ಕಾಮಗಾರಿಗೆ ತುರ್ತು ಆದ್ಯತೆ ನೀಡಬೇಕು ಎಂಬುದನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿ ನಿರ್ಧರಿಸುವ ವ್ಯವಸ್ಥೆ ಅಗತ್ಯ ಎಂದು ಎ. ಮಂಜು ಹೇಳಿದರು.