ಶಿವಕುಮಾರ ಕುಷ್ಟಗಿ
ಗದಗ: ಹಗಲಿರುಳು ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ರಕ್ಷಣೆಯಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಗೆ 10ನೇ ತಾರೀಖು ಪೂರ್ಣಗೊಂಡರೂ ವೇತನವಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ!ಪೊಲೀಸ್ ಸಿಬ್ಬಂದಿಗೆ ಸಾಮಾನ್ಯವಾಗಿ ಪ್ರತಿ ತಿಂಗಳ 1ರಿಂದ 5ನೇ ತಾರೀಕಿನೊಳಗೆ ವೇತನ ಕೈಸೇರುತ್ತಿತ್ತು, ಈ ಬಾರಿ ಇನ್ನೂ ವೇತನ ಬಿಡುಗಡೆಯಾಗಿಲ್ಲ. ಹಲವು ತಿಂಗಳಿಂದ ಹೀಗೆಯೇ ವಿಳಂಬ ಆಗುತ್ತಲೇ ಇದೆ. ಈ ವೇತನ ನಂಬಿ ವಿವಿಧ ರೀತಿಯಲ್ಲಿ ಸಾಲ ಮಾಡಿದವರು, ಮನೆ ಬಾಡಿಗೆ, ಮಕ್ಕಳ ಶಾಲಾ ಫೀ ಕಟ್ಟುವವರು ಸಂಕಷ್ಟ ಎದುರಿಸುವಂತಾಗಿದೆ.
ಈ ವೇತನ ವಿಳಂಬಕ್ಕೆ ಅನುದಾನದ ಕೊರತೆಯೇ ಕಾರಣ ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗತಿ ಅಣಕಿಸುವಂತಿದೆ.ಭತ್ಯೆಯೂ ವಿಳಂಬ: ಕೇವಲ ಸಂಬಳ ವಿಳಂಬ ಮಾತ್ರವಲ್ಲದೆ, ಕರ್ತವ್ಯದ ವೇಳೆ ನೀಡಲಾಗುತ್ತಿದ್ದ ಭತ್ಯೆಯಲ್ಲೂ ಕಡಿತ ಮಾಡಿರುವುದು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ವಿಶೇಷ ಕರ್ತವ್ಯದ ಸಮಯದಲ್ಲಿ ಊಟದ ಜತೆಗೆ ₹200 ಭತ್ಯೆ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಯಾವುದೇ ಮುನ್ಸೂಚನೆಯಿಲ್ಲದೆ ₹100ಕ್ಕೆ ಇಳಿಸಲಾಗಿದೆ. ಬೆಲೆ ಏರಿಕೆಯ ಈ ಕಾಲದಲ್ಲಿ ಭತ್ಯೆ ಹೆಚ್ಚಿಸುವ ಬದಲು ಕಡಿತ ಮಾಡಿರುವುದು ಎಷ್ಟು ಸರಿ ಎನ್ನುತ್ತಾರೆ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು. ಸಭಾಪತಿಗೆ ಪತ್ರ: ಪೊಲೀಸ್ ಸಿಬ್ಬಂದಿ ವೇತನ ವಿಳಂಬವಾಗಿರುವ ಕುರಿತು ವಿಧಾನಪರಿಷತ್ ಸಭಾಪತಿಗೆ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ ಅವರು ಬರೆದಿರುವ ಪತ್ರ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸರ್ಕಾರ ಶಿಸ್ತಿನ ಇಲಾಖೆಯ ಬಗ್ಗೆಯೇ ಅದೆಷ್ಟು ನಿರ್ಲಕ್ಷ್ಯ ಹೊಂದಿದೆ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ.
ಅನುದಾನ ಕೊರತೆಯ ನೆಪ: ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಿಗೆ ಕನಿಷ್ಠ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಅನುದಾನ ಕೊರತೆಯ ನೆಪವೊಡ್ಡಿ ಇಲಾಖೆಯು ಇಂತಹ ಪರಿಸ್ಥಿತಿ ನಿರ್ಮಿಸಿರುವುದು ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ಮನೋಬಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಸರ್ಕಾರ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದರು.