ಸಾರಾಂಶ
ಕಳೆದ ಮೂರು ತಿಂಗಳಿಂದ ಖರೀದಿ ಕೇಂದ್ರಕ್ಕೆ ರಾಗಿ ಪೂರೈಕೆ ಮಾಡಿದ ರೈತರಿಗೆ ಸರ್ಕಾರದಿಂದ ಮೂರು ಕೋಟಿ ರು. ಹಣ ಬಾಕಿ ಬರಬೇಕಾಗಿದೆ. ಇದರಿಂದ ರೈತರು ಮುಂದಿನ ಕೃಷಿ ಚಟುವಟಿಕೆಗಳಿಗಾಗಿ ರಸಗೊಬ್ಬರ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಶುಲ್ಕ ಕಟ್ಟಲು ಮತ್ತು ಸಂಸಾರ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಖರೀದಿ ಕೇಂದ್ರಕ್ಕೆ ರಾಗಿ ಪೂರೈಕೆ ಮಾಡಿದ ಕೃಷಿಕರಿಗೆ ಹಣ ಪಾವತಿ ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ತಾಲೂಕಿನ ಕೊಪ್ಪದಲ್ಲಿ ರೈತರು ಸೋಮವಾರ ಖಾಲಿ ಬಾಣಲಿಗಳನ್ನು ತಲೆ ಮೇಲೆ ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು.ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ನೇತೃತ್ವದಲ್ಲಿ ಕೊಪ್ಪ ಗ್ರಾಮದ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆಗಿಳಿದ ರೈತರು ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಇದರಿಂದ ಮದ್ದೂರು, ನಾಗಮಂಗಲ ಹಾಗೂ ಮಂಡ್ಯ ಮಾರ್ಗದ ರಸ್ತೆಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ರಾಜ್ಯ ಸರ್ಕಾರ, ಕೃಷಿ ಸಚಿವ ಚೆಲುವರಾಯಸ್ವಾಮಿ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿದ ರೈತರಿಗೆ ಈ ಕೂಡಲೇ ಹಣ ಪಾವತಿ ಮಾಡುವಂತೆ ಅಗ್ರಪಡಿಸಿದರು.ಕಳೆದ ಮೂರು ತಿಂಗಳಿಂದ ಖರೀದಿ ಕೇಂದ್ರಕ್ಕೆ ರಾಗಿ ಪೂರೈಕೆ ಮಾಡಿದ ರೈತರಿಗೆ ಸರ್ಕಾರದಿಂದ ಮೂರು ಕೋಟಿ ರು. ಹಣ ಬಾಕಿ ಬರಬೇಕಾಗಿದೆ. ಇದರಿಂದ ರೈತರು ಮುಂದಿನ ಕೃಷಿ ಚಟುವಟಿಕೆಗಳಿಗಾಗಿ ರಸಗೊಬ್ಬರ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಶುಲ್ಕ ಕಟ್ಟಲು ಮತ್ತು ಸಂಸಾರ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕೂಡಲೇ ರಾಗಿ ಖರೀದಿ ಮಾಡಿದ ಹಣ ಬಿಡುಗಡೆ ಮಾಡುವಂತೆ ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಒತ್ತಾಯಿಸಿದರು.
ನಂತರ ಕೊಪ್ಪ ನಾಡಕಚೇರಿಗೆ ತೆರಳಿದ ರೈತರು ಬೇಡಿಕೆ ಕುರಿತಂತೆ ಉಪತಹಸೀಲ್ದಾರ್ ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸೋ.ಶಿ.ಪ್ರಕಾಶ್, ಪ್ರಭುಲಿಂಗ,ವೆಂಕಟೇಶ್, ರಾಮೇಗೌಡ, ಮಂಜೇಶ್, ಜಗದೀಶ, ಕುಮಾರ, ಚಿಕ್ಕಲಿಂಗಯ್ಯ, ಶಿವರಾಮ, ಶಿವಲಿಂಗಯ್ಯ ಮತ್ತಿತರರು ಇದ್ದರು.