ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಮೇಲ್ಕಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ 40 ರೈತರಿಗೆ ಭೂ-ಪರಿಹಾರ ನೀಡಲು ವಿಳಂಬ ಮಾಡಿದ ಹೇಮಾವತಿ ಯೋಜನೆ ಎಚ್.ಎಲ್.ಬಿ.ಸಿ ನಂ.3 ಕಚೇರಿಯಲ್ಲಿನ ವಸ್ತುಗಳನ್ನು ಮಂಡ್ಯ ಜಿಲ್ಲಾ ಮತ್ತು ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರ ಸಮ್ಮುಖದಲ್ಲಿ ಜಪ್ತಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹೊಸಹೊಳಲು ಮೇಲ್ಕಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ 40 ರೈತರಿಗೆ ಭೂ-ಪರಿಹಾರ ನೀಡಲು ವಿಳಂಬ ಮಾಡಿದ ಹೇಮಾವತಿ ಯೋಜನೆ ಎಚ್.ಎಲ್.ಬಿ.ಸಿ ನಂ.3 ಕಚೇರಿಯಲ್ಲಿನ ವಸ್ತುಗಳನ್ನು ಮಂಡ್ಯ ಜಿಲ್ಲಾ ಮತ್ತು ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.

ಮೇಲ್ಕಾಲುವೆ ಯೋಜನಾ ವ್ಯಾಪ್ತಿಯ 40ಕ್ಕೂ ಹೆಚ್ಚು ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಕಾನೂನು ಪ್ರಕಾರ ನಿಗದಿತ ಅವಧಿಯಲ್ಲಿ ಭೂ-ಪರಿಹಾರ ಪಾವತಿಯಾಗಬೇಕಿದ್ದರೂ ಹಲವು ವರ್ಷಗಳು ಕಳೆದರೂ ಹೇಮಾವತಿ ಇಲಾಖೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿಸಿತ್ತು.

ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯ ರೈತರ ಪರ ಆದೇಶ ನೀಡಿತ್ತು. ನ್ಯಾಯಾಲಯದಿಂದ ಆದೇಶವಾಗಿದ್ದರೂ ಭೂ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಪಟ್ಟಣದ ಎಚ್.ಎಲ್.ಬಿ.ಸಿ ನಂ.3 ಕಚೇರಿಗೆ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ ನ್ಯಾಯಾಲಯದ ಸೂಚನೆ ಮೇರೆಗೆ ಕಚೇರಿಯಲ್ಲಿರುವ ಸಾಮಗ್ರಿಗಳನ್ನು ಜಪ್ತಿ ಮಾಡಿದರು.

ನ್ಯಾಯಾಲಯದ ಸಿಬ್ಬಂದಿ, ಸಂತ್ರಸ್ತ ರೈತರು ಹಾಗೂ ಅವರ ವಕೀಲರ ಸಮ್ಮುಖದಲ್ಲಿ ಕೋರ್ಟ್‌ ಆದೇಶದಂತೆ ಕಚೇರಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಟೇಬಲ್, ಚೇರ್ ಸೇರಿದಂತೆ ಎಲ್ಲಾ ಪೀಠೋಪಕರಣಗಳನ್ನು ಪಂಚನಾಮೆ ನಡೆಸಿ ವಶಕ್ಕೆ ಪಡೆಯಲಾಯಿತು.

ನಮ್ಮ ಜಮೀನು ಬಳಿ ಹೋಗಿರುವ ಹೊಸಹೊಳಲು ಮೇಲ್ಕಾಲುವೆ ನಮ್ಮ ಭಾಗದ ನೂರಕ್ಕೂ ಹೆಚ್ಚು ರೈತರು ಜಮೀನು ಕಾಲುವೆಗೆ ಹೋಗಿ ನಾವು ಬೀದಿಗೆ ಬಂದಿದ್ದೇವೆ. ಪರಿಹಾರ ಕೇಳಲು ಕಚೇರಿಗೆ ಹೋದರೆ ಅಧಿಕಾರಿಗಳು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಇಂದು ನ್ಯಾಯಾಲಯ ಹಾಗೂ ನ್ಯಾಯದ ಪರ ನಿಂತ ನಮ್ಮ ವಕೀಲ ಧನಂಜಯ್‌ಕುಮಾರ್ ನಮಗೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಸಂತ್ರಸ್ತ ರೈತ ವಿಷಕಂಠ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಪರ ವಕೀಲ ವಿ.ಎಸ್‌ಧನಂಜಯ್‌ಕುಮಾರ್, ವಿಷಕಂಠ, ಕೃಷ್ಣೇಗೌಡ,ರಮೇಶ್, ಸ್ವಾಮಿಕೆ.ಎಸ್, ಶ್ರೀನಿವಾಸ್, ರಾಮಕೃಷ್ಣೇಗೌಡ, ಬೆಟ್ಟೇಗೌಡ, ಚಲುವಯ್ಯ, ಮಹೇಶ್‌ಗೌಡ, ಬೋರಲಿಂಗೇಗೌಡ, ಮೊಗಣ್ಣೆಗೌಡ, ನಾಗರಾಜಯ್ಯ, ಎಂ.ಪಿ ಪುಟ್ಟರಾಜು, ಪಿ.ಜೆ ನಾರಾಯಣಸ್ವಾಮಿ, ಶಿವರಾಮು, ಜಗದೀಶ್, ಕುಳ್ಳೇಗೌಡ, ಸೋಮನಾಥ ಸೇರಿದಂತೆ ಹಲವು ರೈತರು ಇದ್ದರು.