ದಾಖಲೆ ವಿಲೇವಾರಿ ವಿಳಂಬ, ಸರ್ವೇ ಸಿಬ್ಬಂದಿಗೆ ಲೋಕಾಯುಕ್ತ ತರಾಟೆ

| Published : Apr 07 2024, 01:45 AM IST

ದಾಖಲೆ ವಿಲೇವಾರಿ ವಿಳಂಬ, ಸರ್ವೇ ಸಿಬ್ಬಂದಿಗೆ ಲೋಕಾಯುಕ್ತ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಏನ್ರಿ ಇದೇನಾ ನೀವು ಮಾಡುವ ಕೆಲಸ? ಸಕಾಲಕ್ಕೆ ದಾಖಲೆ ವಿಲೇವಾರಿ ಮಾಡದೇ ರೈತರನ್ನು ನಿತ್ಯ ಕಚೇರಿ ಅಲೆಯುವಂತೆ ಮಾಡುತ್ತೀರಲ್ಲ ನಿಮಗೆ ಏನು ಅನಿಸುವುದಿಲ್ಲವೇ? ವಾರದಲ್ಲಿಯೇ ವಿಲೇವಾರಿ ಮಾಡಬೇಕಿದ್ದ ದಾಖಲೆಗಳನ್ನು ಮೂರ್ನಾಲ್ಕು ತಿಂಗಳಾದರೂ ಗಂಟುಕಟ್ಟಿ ಇಟ್ಟಿದ್ದಿರಲ್ಲ ಏಕೆ

ರೋಣ: ಅಳತೆ, ಪೋಡಿ, ಹಿಸ್ಸಾ ರದ್ದು ಆದೇಶ, ಹದ್ದುಬಸ್ತು, ಈ ಸ್ವತ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮೂರು ತಿಂಗಗಳಿಗೂ ಹೆಚ್ಚು ಕಾಲ ವಿಲೇವಾರಿ ಮಾಡದೇ ಕಚೇರಿಯಲ್ಲಿಯೇ ಗಂಟುಕಟ್ಟಿ ಇಟ್ಟುಕೊಂಡಿದ್ದನ್ನು ಕಂಡ ಜಿಲ್ಲಾ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಪಟ್ಟಣದ ತಾಲೂಕು ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕು ಸರ್ವೆ ಇಲಾಖೆಯಿಂದ ಸಕಾಲಕ್ಕೆ ದಾಖಲೆಗಳ ವಿಲೇವಾರಿಯಲ್ಲಿನ ವಿಳಂಬದಿಂದ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಪ್ಪಿ ನೇತೃತ್ವದ ತಂಡ ಶನಿವಾರ ಪಟ್ಟಣದ ಸರ್ವೇ ಇಲಾಖೆ ಕಚೇರಿಗೆ ತೆರಳಿ ಕಡತ ಪರಿಶೀಲಿಸಿತು.

ಆಗ ಬಹುತೇಕ ಕಡತಗಳು ಎರಡು, ಮೂರು ತಿಂಗಳು ಹೀಗೆ ಅವಧಿ ಮೀರಿದರೂ ರೈತರಿಗೆ ವಿಲೇವಾರಿ ಮಾಡದೆ ಇರುವುದನ್ನು ಕಂಡು ಕೆಂಡಾಮಂಡಲಾದ ಎಸ್ಪಿ ಸತೀಶ ಚಿಟಗುಬ್ಬಿ ಅವರು, ಕಚೇರಿ ಮೇಲ್ವಿಚಾರಕಿ ಉಮಾದೇವಿ ಜಾಲಿಹಾಳ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡು, ಏನ್ರಿ ಇದೇನಾ ನೀವು ಮಾಡುವ ಕೆಲಸ? ಸಕಾಲಕ್ಕೆ ದಾಖಲೆ ವಿಲೇವಾರಿ ಮಾಡದೇ ರೈತರನ್ನು ನಿತ್ಯ ಕಚೇರಿ ಅಲೆಯುವಂತೆ ಮಾಡುತ್ತೀರಲ್ಲ ನಿಮಗೆ ಏನು ಅನಿಸುವುದಿಲ್ಲವೇ? ವಾರದಲ್ಲಿಯೇ ವಿಲೇವಾರಿ ಮಾಡಬೇಕಿದ್ದ ದಾಖಲೆಗಳನ್ನು ಮೂರ್ನಾಲ್ಕು ತಿಂಗಳಾದರೂ ಗಂಟುಕಟ್ಟಿ ಇಟ್ಟಿದ್ದಿರಲ್ಲ ಏಕೆ? ಎಂದು ತರಾಟೆ ತೆಗೆದುಕೊಂಡರು.

ಬಹುತೇಕ ಪ್ರಕರಣಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದೇ ಅನಗತ್ಯ ರೈತರಿಗೆ ಕಚೇರಿಗೆ ಅಲೆಯುವಂತೆ ಮಾಡಿದ ಎಡಿಎಲ್ಆರ್ (ಭೂಮಾಪನ ತಾಲೂಕು ಅಧಿಕಾರಿ) ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ವರದಿ ನೀಡಲಾಗುವುದು. ನಿಮ್ಮೆಲ್ಲರ ಮೇಲೆ ಕ್ರಮ ಜರುಗಿಸಬೇಕಿದೆ ಎಂದರು.

ವಿಲೇವಾರಿ ಮಾಡಿ: ಕೂಡಲೇ ರೈತರಿಗೆ, ಜಮೀನು ಮಾಲೀಕರಿಗೆ ಪೋನ್ ಮೂಲಕ ಸಂಪರ್ಕಿಸಿ, ಪತ್ರಿಕೆ ಪ್ರಕಟಣೆ ನೀಡಿ, ಬಾಕಿ ಇರುವ ಎಲ್ಲ ಪ್ರಕರಣಗಳನ್ನು ತ್ವರಿತಗತಿ ವಿಲೇವಾರಿ ಮಾಡಬೇಕು ಎಂದು ಎಸ್ಪಿ ಸತೀಶ ಚಿಟಗುಬ್ಬಿ ಖಡಕ್ಕಾಗಿ ಸೂಚನೆ ನೀಡಿದರು.

ನೀರಾವರಿ ಇಲಾಖೆಗೆ ಭೇಟಿ: ತಾಲೂಕಿನ ಮಲ್ಲಾಪುರ ಗ್ರಾಮದ ಸರ್ವೇ ನಂಬರ್ 186/3 ರಲ್ಲಿ ಕಳೆದ 22 ವರ್ಷದ ಹಿಂದೆ ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಿಸಿದ್ದು, ಕಾಲುವೆ ನಿರ್ಮಾಣಕ್ಕೆ 7 ಗುಂಟೆ ಜಮೀನು ಹೋಗಬೇಕಿತ್ತು. ಆದರೆ 7 ಗುಂಟೆ ಜತೆಗೆ ಇನ್ನೂ ಹೆಚ್ಚುವರಿಯಾಗಿ 9 ಗುಂಟೆ ಹೋಗಿದೆ. ಒಟ್ಟು 16 ಗುಂಟೆ ಜಮೀನು ಕಾಲುವೆ ನಿರ್ಮಾಣಕ್ಕೆ ತೆಗೆದುಕೊಂಡಿದ್ದಾರೆ. ಉತಾರದಲ್ಲಿ 7 ಗುಂಟೆಯಲ್ಲಿ ಮಾತ್ರ ಕಾಲುವೆ ನಿರ್ಮಾಣವಾಗಿದೆ ಎಂದು ನಮೂದಿಸಿದ್ದಾರೆ. ಹೆಚ್ಚುವರಿಯಾಗಿ ಹೋಗಿದ್ದ 9 ಗುಂಟೆ ಜಮೀನಿಗೆ ಉತಾರ (ಪಹಣಿ ಪತ್ರ) ದಲ್ಲೂ ದಾಖಲು ಮಾಡಿಲ್ಲ, ಪರಿಹಾರ ನೀಡಿಲ್ಲ. ಹೆಚ್ಚುವರಿಯಾಗಿ ಹೋಗಿದ್ದ 9 ಗುಂಟೆ ಜಮೀನ ಪರಿಹಾರಕ್ಕಾಗಿ ನೀರಾವರಿ ಇಲಾಖೆ ಕಚೇರಿಗೆ ಕಳೆದ 22 ವರ್ಷಗಳಿಂದ ನಾನು ಮತ್ತು ನನ್ನ ತಂದೆ ಅಲೆಯುತ್ತಿದ್ದು, ಈ ವರೆಗೂ ನ್ಯಾಯ ಸಿಕ್ಕಿಲ್ಲ ಎಂದು ತಾಲೂಕಿನ ಮಲ್ಲಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಶರಣಗೌಡ ಹಿರೇಗೌಡ್ರ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರಲ್ಲಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸತೀಶ ಚಿಟಗುಬ್ಬಿ ಹಾಗೂ ತಂಡ ನೀರಾವರಿ ಇಲಾಖೆಗೆ ತೆರಳಿ ಎಇಇ ಜಗದೀಶ ಬಿ. ಅವರಿಗೆ ಶೀಘ್ರ ಜಮೀನು ಅಳತೆ ಮಾಡಿ, ಕಾಲುವೆ ನಿರ್ಮಾಣಕ್ಕೆ ಹೋಗಿದ್ದ ಹೆಚ್ಚುವರಿ ಜಮೀನಿಗೆ ಪರಿಹಾರ ಬರುವಂತೆ ಕ್ರಮ‌ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಇನ್‌ಸ್ಪೆಕ್ಟರ್‌ ರವಿ ಪುರುಷೋತ್ತಮ, ಸಿಬ್ಬಂದಿ ಯು.ಎನ್. ಸಂಗನಾಳ, ಮುತ್ತುರಡ್ಡಿ ಬಾರಡ್ಡಿ, ಎಸ್.ವಿ. ನೈನಾಪುರ ಇದ್ದರು.