ಸಕ್ಕರೆ ಕಾರ್ಖಾನೆ ಕಾರ್ಮಿಕರ ವೇತನ ಹೆಚ್ಚಳ ವಿಳಂಬ-ಖಂಡನೆ

| Published : Jul 13 2025, 01:19 AM IST

ಸಾರಾಂಶ

ಕಂಪ್ಲಿಯ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಂಗಳೂರಿನ ಕರ್ನಾಟಕ ಶುಗರ್ ವರ್ಕರ್ಸ್‌ ಫೆಡರೇಷನ್ ವತಿಯಿಂದ ಕರ್ನಾಟಕ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಮಾವೇಶ ನಡೆಯಿತು.

ಕಂಪ್ಲಿ: ರಾಜ್ಯದ ಸಕ್ಕರೆ ಹಾಗೂ ಅದರ ಸಮೂಹ ಉದ್ಯಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ವೇತನ ಹೆಚ್ಚಳದಲ್ಲಿ ಸರ್ಕಾರ ವಿಳಂಬ ಧೋರಣೆ ತೋರುತ್ತಿರುವುದು ಖಂಡನೀಯವಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಶುಗರ್ ವರ್ಕರ್ಸ್‌ ಫೆಡರೇಷನ್ ಗೌರವಾಧ್ಯಕ್ಷ ಅರವಿ ಬಸವನಗೌಡ ಹೇಳಿದರು.

ಇಲ್ಲಿನ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಂಗಳೂರಿನ ಕರ್ನಾಟಕ ಶುಗರ್ ವರ್ಕರ್ಸ್‌ ಫೆಡರೇಷನ್ ಹಮ್ಮಿಕೊಂಡಿದ್ದ ಕರ್ನಾಟಕ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಮಾವೇಶದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

2022ರ ಮಾ. 31ಕ್ಕೆ ಸಕ್ಕರೆ ಕಾರ್ಮಿಕರ ತ್ರಿಪಕ್ಷೀಯ ವೇತನ ಒಪ್ಪಂದ ಮುಕ್ತಾಯವಾಗಿದೆ. ವೇತನ ಪರಿಷ್ಕರಣೆಗೆ ಸರ್ಕಾರ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡ ತ್ರಿಪಕ್ಷೀಯ ವೇತನ ಸಮಿತಿ ರಚಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರಿಂದ 2023ರ ನ. 17ರಂದು ತ್ರಿಪಕ್ಷೀಯ ಸಮಿತಿಯನ್ನು ರಾಜ್ಯ ಕಾರ್ಮಿಕರ ಅಧ್ಯಕ್ಷತೆ, ಸಕ್ಕರೆ ಸಚಿವರ ಉಪಾಧ್ಯಕ್ಷತೆಯಲ್ಲಿ ರಚಿಸಲಾಯಿತು. ವೇತನ ಸಮಿತಿಯ ಪ್ರಥಮ ಸಭೆ ಕರೆಯುವಂತೆ ಪುನಃ ಒತ್ತಾಯಿಸಿದಾಗ 2025ರ ಫೆ. 20ರಂದು ಬೆಂಗಳೂರಿನ ವಿಕಾಸಸೌಧಲ್ಲಿ ಮೊದಲ ಸಭೆ ಕರೆಯಲಾಯಿತು. ಈ ಸಭೆಯಲ್ಲಿ ಆಡಳಿತ ವರ್ಗದವರು ಗೈರು ಹಾಜರಾಗಿದ್ದರಿಂದ ಸಭೆ ಮುಂದೂಡಲಾಯಿತು. ಈಗ ಎರಡು ತಿಂಗಳಾದರೂ ಸಭೆ ನಡೆದಿಲ್ಲ. ಇದರಿಂದ ರಾಜ್ಯದ ನಾನಾ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸುಮಾರು 75 ಸಾವಿರ ಕಾರ್ಮಿಕರ ವೇತನ ಹೆಚ್ಚಳವಾಗಿಲ್ಲ. ಕೂಡಲೇ ತ್ರಿಪಕ್ಷೀಯ ವೇತನ ಸಭೆ ಕರೆದು ಶೇ. 30ರಷ್ಟು ವೇತನ ಹೆಚ್ಚಳಗೊಳಿಸಿ ಪರಿಷ್ಕೃತ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆಯ ನೈನಾಗಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಯೂನಿಯನ್ ಅಧ್ಯಕ್ಷ ಮಲ್ಲಿಕಾರ್ಜುನ ಗಂಡುಡಿ ಮಾತನಾಡಿ, ಸಕ್ಕರೆ ಕಾರ್ಖಾನೆಯ ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು. 6ನೇ ವೇತನ ಹಿಂಬಾಕಿ ಪಾವತಿಸಬೇಕು. ಪರಿಷ್ಕೃತ 7ನೇ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ಫೆಡರೇಷನ್‌ ಕಾರ್ಯಾಧ್ಯಕ್ಷ ಜಿ.ಎಸ್. ಚಕ್ರಪಾಣಿ, ವಲಯ ಕಾರ್ಯಾಧ್ಯಕ್ಷ ಬಸವರಾಜ ಪೂಜಾರಿ, ಬೆಳಗಾವಿಯ ವಿಜಯ ಯಾದವ್, ಮುಧೋಳಿನ ಪ್ರಕಾಶ ಬಸಪ್ಪ ಕಬ್ಬೂರು, ಬೀದರಿನ ಅರ್ಜುನ ತಮಗಕರ್, ಕಲ್ಬುರ್ಗಿಯ ಶರಣಬಸಪ್ಪ ಕಲಶೆಟ್ಟಿ, ಬೆಡಕಿಹಾಳಿನ ಸಚಿನ್, ಮೈಸೂರಿನ ಬೃಂಗೇಶ್, ಚಂದ್ರಶೇಖರ ಮೇಟಿ, ಬೆಳಗಾವಿ, ಬಾಗಲಕೋಟೆ, ಮೈಸೂರು, ಬೀದರ್, ಕಲ್ಬುರ್ಗಿ ಜಿಲ್ಲೆಗಳ ಸಹಕಾರಿ, ಖಾಸಗಿ ಕಾರ್ಮಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.