ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಭಾಗಮಂಡಲ ಮೇಲು ಸೇತುವೆ ಕಾಮಗಾರಿ, ಸುವರ್ಣ ಕರ್ನಾಟಕ ಸಮುಚ್ಚಯ ಭವನ, ಕೊಡವ ಹೆರಿಟೇಜ್ ಹಾಗೂ ರಸ್ತೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಹೊರ ವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಭೋಸರಾಜು ಅವರ ಅಧ್ಯಕ್ಷೆಯಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಹಣ ಇದ್ದರೂ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶರಾದ ಸಚಿವ ಭೋಸರಾಜು ಅವರು, ಇಂತಹ ಅಧಿಕಾರಿಗಳನ್ನು ನಾನು ಎಂದೂ ನೋಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಬಂದಾಗ ಅವರ ಗಮನಕ್ಕೆ ತರುತ್ತೇನೆ ಅವರು ಅಲ್ಲೇ ಸಸ್ಪೆಂಡ್ ಮಾಡುತ್ತಾರೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಭಾಗಮಂಡಲ ಮೇಲುಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ಭಾಗಮಂಡಲ ಮೇಲುಸೇತುವೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಕಾಮಗಾರಿ ಪೂರ್ಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವರ ಗಮನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಸುವರ್ಣ ಕರ್ನಾಟಕ ಸಮುಚ್ಚಯ ಭವನ, ಭಾಗಮಂಡಲ ಮೇಲುಸೇತುವೆ, ಕೊಡವ ಹೆರಿಟೇಜ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಸೂಚಿಸಿದರು.
ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು. ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸಗಳನ್ನು ಪರಿಹರಿಸಲಾಗುವುದು, ಅನುದಾನ ಬೇಕಿದ್ದಲ್ಲಿ ಬಿಡುಗಡೆಗೆ ಕ್ರಮವಹಿಸಲಾಗುವುದು, ಆದ್ದರಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರು ನಿರ್ದೇಶನ ನೀಡಿದರು. ನಗರದಲ್ಲಿ ನಿರ್ಮಾಣವಾಗುತ್ತಿರುವ ‘ಸುವರ್ಣ ಕರ್ನಾಟಕ ಸಮುಚ್ಚಯ ಭವನ’ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಶಾಸಕರಾದ ಡಾ.ಮಂತರ್ ಗೌಡ ಅವರು 9 ವರ್ಷ ಆದರೂ ಸಹ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸಿಟ್ಟು ವ್ಯಕ್ತಪಡಿಸಿದರು.ಈ ಸಂದರ್ಭ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಅವರು ಕಾಮಗಾರಿ ಪ್ರಗತಿಯಲ್ಲಿದ್ದು, ಕಟ್ಟಡದ ಒಳಭಾಗದಲ್ಲಿ ಕೆಲಸಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಪರಿಹರಿಸಲಾಗುವುದು. ಈ ರೀತಿ ಹಣ ಇದ್ದರೂ ಸಹ ಕಾಮಗಾರಿ ಕೈಗೊಳ್ಳದೆ ದಿನದೂಡುತ್ತಿರುವುದು ಏಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು.ಈ ಸಂದರ್ಭ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಈಗಾಗಲೇ ಮೊದಲ ಕಂತಿನಲ್ಲಿ 3 ಕೋಟಿ ರು. , ಎರಡನೇ ಕಂತಿನಲ್ಲಿ 2.50 ಕೋಟಿ ರು. ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ರು. ಅನುದಾನ ಇದ್ದು, ಕಾಮಗಾರಿ ಪ್ರಗತಿ ಸಾಧಿಸಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಮಂಗಳೂರು ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ತಡೆಗೋಡೆ ಸಂಬಂಧಿಸಿದಂತೆ ಸಚಿವರು ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಶಾಸಕರಾದ ಡಾ. ಮಂತರ್ ಗೌಡ ಹೊಸ ಟಾರ್ಪಲ್ ಅಳವಡಿಸುವುದನ್ನು ಹೊರತುಪಡಿಸಿದರೆ ಹೊರತು ಬೇರೆ ಯಾವ ಕೆಲಸ ಆಗಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ ಸುವರ್ಣ ಕರ್ನಾಟಕ ಸಮುಚ್ಚಯ ಭವನ 2015 ರಲ್ಲಿ ಆರಂಭವಾಗಿ ಇದುವರೆಗೆ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಆದಷ್ಟು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹೇಳಿದರು.ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಹಾಡಿ ಜನರಿಗೆ ಅರಣ್ಯ ಹಕ್ಕು ಪತ್ರ ವಿತರಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಒದಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯೋಣ ಎಂದು ಹೇಳಿದರು.ಜನರಲ್ ತಿಮ್ಮಯ್ಯ ಪ್ರತಿಮೆ ನಿರ್ಮಾಣ ಸಂಬಂಧ 10 ಲಕ್ಷ ರು. ವನ್ನು ಕೆಎಸ್‌ಆರ್‌ಟಿಸಿಯಿಂದ ಭರಿಸಲಾಗುವುದು ಎಂದು ಹೇಳಲಾಗಿತ್ತು. ಈಗ 4 ಲಕ್ಷ ರು. ಬಿಡುಗಡೆಯಾಗಿದ್ದು, ಅನುದಾನವನ್ನು ನಗರಸಭೆಗೆ ಹಸ್ತಾಂತರಿಸುವಂತೆ ಶಾಸಕರಾದ ಡಾ.ಮಂತರ್ ಗೌಡ ಅವರು ಸೂಚಿಸಿದರು. ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವಂತೆ ಶಾಸಕದ್ವಯರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆಯಾಗಿದ್ದು, ಬರ ನಿರ್ವಹಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಸರ್ಕಾರದಿಂದ 750 ಲಕ್ಷ ರೂ. ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 47 ಕೋಟಿ ರು. ಇದೆ. ತಹಶೀಲ್ದಾರರ ಖಾತೆಯಲ್ಲಿಯೂ ಸಹ ಹಣ ಇದೆ ಎಂದು ಮಾಹಿತಿ ನೀಡಿದರು. ಕುಡಿಯುವ ನೀರು ಜೊತೆಗೆ ಜಾನುವಾರುಗಳಿಗೆ ಮೇವು ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಮುಖ್ಯ ಯೋಜನಾಧಿಕಾರಿ ಝೀವಲ್ ಖಾನ್ ಇತರರು ಇದ್ದರು.
ಗೆಟ್ ಔಟ್ ಎಂದು ಶಿರಸ್ತೇದಾರ್ ಹೊರ ಕಳುಹಿಸಿದ ಸಚಿವರು!ಪೊನ್ನಂಪೇಟೆ ಶಿರಸ್ತೇದಾರ್ ಅವರನ್ನು ಉಸ್ತುವಾರಿ ಸಚಿವ ಭೋಸರಾಜು ಅವರು ಗೆಟ್ ಔಟ್ ಎಂದು ಹೊರಗೆ ಕಳುಹಿಸಿದ ಘಟನೆ ನಡೆಯಿತು.
ಹಕ್ಕುಪತ್ರ ವಿತರಣೆ ವಿಚಾರಕ್ಕೆ ಸಂಬಂಧ ಸಚಿವ ಭೋಸರಾಜ್ ಪ್ರಶ್ನಿಸಿದರು. ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಪ್ರಶಾಂತ್ ಸಭೆಗೆ ಆಗಮಿಸಬೇಕಿತ್ತು. ಆದರೆ ಅವರ ಬದಲು ಶಿರಸ್ತೇದಾರ್ ರವಿ ಸಭೆಗೆ ಬಂದಿದ್ದರು. ಆದರೆ ಶಿರಸ್ತೇದಾರ್ ರವಿ ಉತ್ತರಿಸಲು ಮುಂದೆ ಬಂದ ವೇಳೆ ಭೋಸರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾನು ಪಿಡಿಓ, ತಾಲೂಕು ಕಚೇರಿ ಸಿಬ್ಬಂದಿಗಳೊಂದಿಗೆ ಸಭೆ ಮಾಡಲು ಬಂದಿದ್ದೇನಾ ಎಂದು ಸಚಿವ ಭೋಸರಾಜ್ ಸಿಟ್ಟಾದರು. ನಡಿ ಹೊರಗೆ ಗೆಟ್ ಔಟ್ ಎಂದು ಗದರಿ ಹೊರಗೆ ಕಳುಹಿಸಿದರು. ಹಾಜರಾತಿ ತೆಗೆದುಕೊಳ್ಳುವಾಗ ನಿಮಗೆ ಗೊತ್ತಿಲ್ವಾ ಎಂದು ಎಡಿಸಿ ವೀಣಾ ಅವರನ್ನು ತರಾಟೆಗೆ ತೆಗೆದುಕೊಂಡರು.ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನಲ್ಲಿ ಮಗ್ನರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭೋಸರಾಜು ಅವರು ಗಂಭೀರವಾಗಿ ಮಾತನಾಡುತ್ತಿದ್ದರೆ. ಇತ್ತ ಸಭೆ ಇತ್ತ ಅಧಿಕಾರಿಗಳು ಫೇಸ್‌ಬುಕ್, ಇನ್ಸ್ಟಾಗ್ರಾಮ್ ನೋಡುತ್ತಿದ್ದರು.ಸಭೆಗೂ ನಮಗೂ ಸಂಬಂಧವೇ ಇಲ್ಲದಂತೆ ಮೊಬೈಲ್ ನೋಡುತ್ತಾ ಅಧಿಕಾರಿಗಳು ಕುಳಿತ್ತಿದ್ದರು.