ಫ್ಲೈಓವರ್‌ ಕಾಮಗಾರಿಗೆ ವೇಗ ನೀಡಿ: ಶೀಘ್ರವೇ ಸಿಎಂ ಬಳಿ ನಿಯೋಗ: ಎಸ್.ಪಿ. ಸಂಶಿಮಠ

| Published : Apr 02 2025, 01:00 AM IST

ಫ್ಲೈಓವರ್‌ ಕಾಮಗಾರಿಗೆ ವೇಗ ನೀಡಿ: ಶೀಘ್ರವೇ ಸಿಎಂ ಬಳಿ ನಿಯೋಗ: ಎಸ್.ಪಿ. ಸಂಶಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಫ್ಲೈಓವರ್ ಕಾಮಗಾರಿ ಚುರುಕುಗೊಳಿಸಿ ಬೇಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಎಸ್.ಪಿ. ಸಂಶಿಮಠ ಮನವಿ ಮಾಡಿದರು.

ಹುಬ್ಬಳ್ಳಿ: ಇ-ಸ್ವತ್ತು, ಬಿಆರ್‌ಟಿಎಸ್, ಪ್ಲೈಓವರ್ ಕಾಮಗಾರಿಗೆ ವೇಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಸ್ವತ್ತು ಉದ್ಯಮಿದಾರರಿಗೆ ದೊರೆಯದ ಕಾರಣ ಉತ್ಪಾದನೆಯೂ ಕುಂಠಿತವಾಗುತ್ತಿದೆ. ಇದರಿಂದ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಹೊಸ ಉದ್ಯಮ ಆರಂಭಿಸಲು ನವೋದ್ಯಮಿಗಳು ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿರುವ ಕೈಗಾರಿಕಾ ಪ್ರದೇಶಗಳು ಇನ್ನೂ ಕೆಐಎಡಿಬಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಇದರಿಂದ ಇ-ಸ್ವತ್ತು ಪಡೆಯುವುದು ಕಷ್ಟವಾಗಿದೆ. ಸಾಲ ಪಡೆದು ಉದ್ಯಮ ಸ್ಥಾಪಿಸುವ ಉದ್ಯಮಿಗಳಿಗೆ ಯಾವ ಬ್ಯಾಂಕ್‌ನಲ್ಲಿ ಸಾಲ ದೊರೆಯುತ್ತಿಲ್ಲ. ಎಲ್ಲ ಸಾಲಗಳು ಹಾಗೂ ಓವರ್‌ ಡ್ರಾ- ಸೌಲಭ್ಯಗಳು ಸ್ಥಗಿತವಾಗಿವೆ. ಆದ್ದರಿಂದ ಸರ್ಕಾರ ಇದಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಬಳಿಗಾರ ಮಾತನಾಡಿ, ನಗರದಲ್ಲಿರುವ ಬಿಆರ್‌ಟಿಎಸ್ ಪ್ರತ್ಯೇಕ ಮಾರ್ಗದಿಂದ ಸಾರ್ವಜನಿಕರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಬಿಆರ್‌ಟಿಎಸ್ ಪ್ರತ್ಯೇಕ ಮಾರ್ಗ ತೆರವುಗೊಳಿಸಿ ಎಲ್ಲರಿಗೂ ಮುಕ್ತವಾಗಿ ಅಲೆದಾಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಇಲ್ಲಿಯ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ನಡೆಯುತ್ತಿರುವ ಫ್ಲೈ-ಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆ ಅಕ್ಕಪಕ್ಕದ ಅಂಗಡಿ ವ್ಯಾಪಾರಸ್ಥರಿಗೂ ವ್ಯಾಪಾರವಿಲ್ಲವಾಗಿದೆ. ಧೂಳಿನಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಕಾಮಗಾರಿ ಚುರುಕುಗೊಳಿಸಿ ಬೇಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮಹಾನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ನಿತ್ಯ ಅಲೆದಾಡುವ ಜನರಿಗೆ ತೊಂದರೆಯಾಗಿದೆ. ಪೊಲೀಸರು ಸಂಚಾರ ದಟ್ಟಣೆಯಾಗದಂತೆ ನೋಡಿಕೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು. ಸೈಬರ್ ಕ್ರೈಂ ಪ್ರಕರಣ ಹೆಚ್ಚಳವಾಗುತ್ತಿದ್ದು, ಅದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಗರದಲ್ಲಿ ಹೆಚ್ಚಿನ ಪೊಲೀಸ್ ಠಾಣೆ ಆರಂಭಿಸಿ ಸಿಬ್ಬಂದಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.