ಬಳ್ಳಾರಿ: ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು. ಜೂನ್ ವೇಳೆಗೆ ರಾಜ್ಯ ಸರ್ಕಾರ ನಿಯೋಗ ತೆರಳದಿದ್ದರೆ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮುಖ್ಯಮಂತ್ರಿ ಸಹ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದು ನಿಜ ಎಂದರು.ಎಸ್ ಆರ್ ನೋ ಎಂದು ಹೇಳಲಿ:
ಮುಖ್ಯಮಂತ್ರಿ ನಿಯೋಗ ಕರೆದುಕೊಂಡು ಹೋಗುವ ವಿಚಾರದಲ್ಲಿ ಎಸ್ ಅಥವಾ ನೋ ಎಂಬುದನ್ನಷ್ಟೇ ಹೇಳಲಿ. ವಿನಾಕಾರಣ ಮುಂದೂಡುವುದನ್ನು ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು. ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನುಸರಿಸಲಿಲ್ಲ. ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಶೇ.56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸಲು ಮುತುವರ್ಜಿ ವಹಿಸಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬರೀ ಮುಂದೂಡುವ ಕೆಲಸವಷ್ಟೇ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕುಲಶಾಸ್ತ್ರ ಅಧ್ಯಯನವಾದರೆ ಎಸ್ಟಿಗೆ ಸೇರ್ಪಡೆ: ಕುರುಬ, ಗೊಲ್ಲ, ಕೋಳಿ ಸಮುದಾಯ ಸೇರಿದಂತೆ ಅನೇಕ ಸಮುದಾಯಗಳು ಎಸ್ಟಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ಮನವಿ ಮಾಡಿವೆ. ಅರ್ಹತೆಯಿರುವ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮದು ಯಾವ ಅಭ್ಯಂತರವಿಲ್ಲ. ಆದರೆ, ಆಯಾ ಸಮುದಾಯದ ಕುಲಶಾಸ್ತ್ರ ಅಧ್ಯಯನ ಆಗಬೇಕು ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜೋಳದರಾಶಿ ತಿಮ್ಮಪ್ಪ, ನರಸಿಂಹಯ್ಯ, ಕೆ.ಆರ್.ರಾಜಪ್ಪ, ರಾಜಣ್ಣ, ವೆಂಕಟೇಶ್ ನಾಯಕ, ಲೋಕೇಶ್ ನಾಯಕ, ಜಗನ್, ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಎರ್ರಿಸ್ವಾಮಿ, ಹನುಮಂತರಾಯಪ್ಪ ಇತರರಿದ್ದರು.
ಎ ರೆಡ್ಡಿ-ಬಿ ರೆಡ್ಡಿ ಸಮಾಜಕ್ಕೆ ಮಾಡಿದ್ದೇನು?:ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿ ನಡೆದ ಬ್ಯಾನರ್ ಗಲಾಟೆ ಮಾಡಿದ "ಎ " ರೆಡ್ಡಿ ಮತ್ತು "ಬಿ "ರೆಡ್ಡಿ ವಾಲ್ಮೀಕಿ ಸಮಾಜಕ್ಕೆ ನೀಡಿದ ಕೊಡುಗೆ ಏನು? ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ಈ ಇಬ್ಬರು ರೆಡ್ಡಿಗಳು ನಮ್ಮ ಸಮಾಜದ ಜನರಿಗೆ ಏನಾದರೂ ಸಹಾಯ ಮಾಡಿದ್ದಾರಾ? ವಿಧಾನಸಭೆಗಳಲ್ಲಿ ಮೀಸಲಾತಿ ಹೆಚ್ಚಿಸುವ ಸಂಬಂಧ 9ನೇ ಶೆಡ್ಯೂಲ್ ಕುರಿತು ಪ್ರಸ್ತಾಪ ಮಾಡಿದ್ದಾರಾ? ಯಾರಿಗಾದರೂ ಟ್ರ್ಯಾಕ್ಟರ್ ಕೊಡಿಸಿದ್ದಾರಾ? ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಿದ್ದಾರಾ? ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು.