ಚಳಿಗಾಲದ ಅಧಿವೇಶನದ ವೇಳೆ ಪಾಲಿಕೆಯ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದ್ದೀರಿ. ಅಧಿವೇಶನವೇ ಮುಗಿದುಹೋಯಿತು. ಏಕೆ ಕರೆದುಕೊಂಡು ಹೋಗಲಿಲ್ಲ. ನಿಯೋಗ ತೆಗೆದುಕೊಂಡು ಹೋಗಿದ್ದರೆ ಇದಷ್ಟೇ ಅಲ್ಲ. ಪಾಲಿಕೆಗೆ ಬರಬೇಕಿದ್ದ ಅನುದಾನದ ಬಗ್ಗೆ ಚರ್ಚೆ ನಡೆಸಬಹುದಿತ್ತು.
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರದ ಸಮಗ್ರ ಅಭಿವೃದ್ಧಿ, ಸರ್ಕಾರದಿಂದ ಬರಬೇಕಿರುವ ನೂರಾರು ಕೋಟಿ ಅನುದಾನ, ಹಳೇ ನ್ಯಾಯಾಲಯ ಸಂಕೀರ್ಣ ಪಾಲಿಕೆಗೆ ಹಸ್ತಾಂತರಿಸುವ ಕುರಿತಂತೆ ಚರ್ಚಿಸಲು ಸರ್ವಪಕ್ಷ ನಿಯೋಗವನ್ನು ಶೀಘ್ರದಲ್ಲೇ ಬೆಂಗಳೂರಿಗೆ ಕರೆದೊಯ್ಯಲು ಪಾಲಿಕೆ ನಿರ್ಧರಿಸಿದೆ. ಈ ನಡುವೆ ಸರ್ಕಾರ ಸಮಯ ನೀಡದಿರುವುದಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ವಾಗ್ವಾದಕ್ಕೂ ಕಾರಣವಾಯಿತು.ಹಳೆಯ ನ್ಯಾಯಾಲಯ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವಂತೆ ಕೇಳಲಾಗಿತ್ತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಈ ಸಂಬಂಧ ಪಾಲಿಕೆಗೆ ಭರವಸೆ ನೀಡಿದ್ದರು. ಅತ್ತ ಆ ಬಿಲ್ಡಿಂಗ್ ತಮಗೆ ಬೇಕೆಂದು ವಕೀಲರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಪಾಲಿಕೆಗೆ ಹಸ್ತಾಂತರಿಸುವ ಸಂಬಂಧ ವಿಷಯ ಎಲ್ಲಿಗೆ ಬಂತು ಎಂಬುದು ಗೊತ್ತಾಗುತ್ತಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ರಾಜಣ್ಣ ಕೊರವಿ, ಚಳಿಗಾಲದ ಅಧಿವೇಶನದ ವೇಳೆ ಪಾಲಿಕೆಯ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದ್ದೀರಿ. ಅಧಿವೇಶನವೇ ಮುಗಿದುಹೋಯಿತು. ಏಕೆ ಕರೆದುಕೊಂಡು ಹೋಗಲಿಲ್ಲ. ನಿಯೋಗ ತೆಗೆದುಕೊಂಡು ಹೋಗಿದ್ದರೆ ಇದಷ್ಟೇ ಅಲ್ಲ. ಪಾಲಿಕೆಗೆ ಬರಬೇಕಿದ್ದ ಅನುದಾನದ ಬಗ್ಗೆ ಚರ್ಚೆ ನಡೆಸಬಹುದಿತ್ತು ಎಂದು ನುಡಿದರು. ಅದಕ್ಕೆ ಮೇಯರ್ ಜ್ಯೋತಿ ಪಾಟೀಲ, ವಿಪಕ್ಷ ನಾಯಕರು ಸರ್ಕಾರದ ಸಮಯ ಪಡೆದು ತಿಳಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಸಮಯ ಪಡೆಯುವಲ್ಲಿ ಅವರೇ ವಿಫಲವಾಗಿದ್ದಾರೆ. ಹೀಗಾಗಿ ಅಧಿವೇಶನದ ವೇಳೆ ಕರೆದುಕೊಂಡು ಹೋಗಲು ಆಗಲಿಲ್ಲ ಎಂದರು.ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಇಮ್ರಾನ್ ಎಲಿಗಾರ್, ಈ ರೀತಿ ಮಾತನಾಡಬೇಡಿ. ಆಗ ಏನೋ ಸಮಸ್ಯೆಯಾಯಿತು. ಹೀಗಾಗಿ ಕರೆದುಕೊಂಡು ಹೋಗಲಿಲ್ಲ ಎಂದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು. ಮಜ್ಜಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಸಕ್ತಿಯೇ ಇಲ್ಲ. ಶಾಸಕರು ಅವರ ಮಧ್ಯೆ ಸಮನ್ವಯ ಇಲ್ಲ. ಹೀಗಾಗಿ ಸಮಯ ಸಿಕ್ಕಿರಲಿಲ್ಲ ಎಂದರು. ಆಗ ಜಟಾಪಟಿ ಮತ್ತಷ್ಟು ಜೋರಾಯಿತು. ಅಲ್ಲದೇ, ಜೀರೋ ಹೀರೋ ಎಂಬೆಲ್ಲ ಟೀಕೆಗಳು ಮತ್ತೆ ಪ್ರತಿಧ್ವನಿಸಿದವು.
ಯಪ್ಪಾ ಯಣ್ಣಾ ಅಂದ್ರೂ:ಯಪ್ಪಾ ಯಣ್ಣಾ ಅಂದ್ರೂ ಸಿಗ್ತಾ ಇಲ್ಲ..!, ಯಪ್ಪಾ ಯಣ್ಣಾ ಅಂದ್ರೂ ಅರ್ಹರು ಟೆಂಡರ್ ಹಾಕುವವರು ಸಿಗ್ತಾ ಇಲ್ಲ...!
ಇದು ಬೀದಿನಾಯಿ ಹಿಡಿಯುವವರು ಕುರಿತಂತೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ ಬಗೆ.ಸುಪ್ರೀಂಕೋರ್ಟ್ ಆದೇಶದಂತೆ ಬೀದಿನಾಯಿಗಳ ಶೆಲ್ಟರ್ ನಿರ್ಮಾಣಕ್ಕೆ ₹ 2.59 ಕೋಟಿ ಯೋಜನೆಗೆ ಒಪ್ಪಿಗೆ ಕೊಡುವ ವಿಷಯ ಪ್ರಸ್ತಾಪ ಬಂದಾಗ ಈರೇಶ ಅಂಚಟಗೇರಿ ಅವರು, ಬೀದಿನಾಯಿ ಹಿಡಿಯಲು ಬರುವಂತೆ ಕೋರಿದರೂ ಬರುತ್ತಿಲ್ಲ. ಸರಿಯಾಗಿ ಸ್ಪಂದಿಸುತ್ತಿಲ್ಲ. ಬೀದಿನಾಯಿ ಹಿಡಿಯಲು ವಾಹನಗಳೇ ಇಲ್ಲ. ಇನ್ನು ಶೆಲ್ಟರ್ ನಿರ್ಮಿಸಿ ಪ್ರಯೋಜನವೇನು? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಘಾಳಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ 3 ಏಜೆನ್ಸಿಗಳು ಬೇಕು. ಆದರೆ ಒಂದೇ ಏಜೆನ್ಸಿ ಇದೆ. ಅವರಿಗೆ ಕೈ ಕಾಲು ಹಿಡಿದು, ಯಪ್ಪಾ ಯಣ್ಣಾ ಅಂದು ಟೆಂಡರ್ ಹಾಕಿಸಿದ್ದೇವೆ. ನಾಯಿ ಹಿಡಿಯುವವರ ಸಮಸ್ಯೆ ಸಾಕಷ್ಟಿದೆ. ಆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಬಳಿಕ ಶೆಲ್ಟರ್ ನಿರ್ಮಾಣಕ್ಕೆ ಅನುಮತಿ ನೀಡಲಾಯಿತು.