ಧಾರವಾಡ:
ಕಳಸಾ-ಬಂಡೂರಿ ನಾಲಾ ಜೋಡಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತಪರ ಸಂಘಟನೆಗಳ ವತಿಯಿಂದ ಮೇ 8ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸಮಿತಿ ರಾಜ್ಯ ಉಪಾಧ್ಯಕ್ಷ ನಿಂಗಪ್ಪ ದಿವಟಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ 500 ರೈತರು ದೆಹಲಿಗೆ ತೆರಳಲಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಮೇ 12ರಂದು ಪ್ರತಿಭಟನೆ ನಡೆಸಲಾಗುವುದು. ಧಾರವಾಡ ರೈಲು ನಿಲ್ದಾಣದಿಂದ ರೈತರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸಮಿತಿ, ಕರ್ನಾಟಕ ರೈತರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ರೈತರ ಸಾಲಮನ್ನಾ, ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಹಾಗೂ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಯೋಜನೆ ಕೂಡಲೇ ಜಾರಿಗೊಳಿಸುವುದು ಮತ್ತು ರೈತರಿಗೆ ಉಚಿತವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಬೇಕೆಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ ರೈತರ ಸಮಸ್ಯೆ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಾರಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ರೈತ ಮುಖಂಡ ವೀರಸಿಂಗ್ ರಜಪೂತ, ಚೆನ್ನಮ್ಮ ಕೊಟಬಾಗಿ, ಶಂಕ್ರಮ್ಮ ತಡಕಣ್ಣವರ, ಯಲ್ಲಪ್ಪ ಗುಡಗೇರಿ, ಮಡಿವಾಳಪ್ಪ ಮಡಿವಾಳರ, ಭೀಮಸಿಂಗ್ ರಜಪೂತ, ಗೂಳಪ್ಪ ತಳವಾರ, ಗಂಗಮ್ಮ ಎಣ್ಣಿ ಇದ್ದರು.