ಸಾರಾಂಶ
ಕನ್ನಡಪ್ರಭ ವಾರ್ತೆ, ಶೃಂಗೇರಿ
ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಮೂಲಕ ಅಭೂತಪೂರ್ವ ಜಯ ಗಳಿಸಿ ಕಾಂಗ್ರೇಸ್, ಆಮ್ ಆದ್ಮಿ ಪಕ್ಷಗಳಿಗೆ ದೆಹಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಹೇಳಿದರು.ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೇಜ್ರಿವಾಲ್ ರಾಜ್ಯವನ್ನೆ ಲೂಟಿ ಮಾಡಿ ಭ್ರಷ್ಟಾಚಾರ ಎಸಗಿ ಜೈಲು ಸೇರಿದರು. ಮಂತ್ರಿ ಮಂಡಲದಲ್ಲಿನ ಬಹುತೇಕ ಸಚಿವರು, ಶಾಸಕರು ಜೈಲು ಪಾಲಾದರು.ಇವರ ಭ್ರಷ್ಟಾಚಾರ, ಲೂಟಿಯಿಂದ ಬೇಸತ್ತ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಗೆಲ್ಲುವ ಹಗಲು ಕನಸು ಕಂಡಿತ್ತು. ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ದುಸ್ಥಿತಿ ಇದು. ಬೇಜವಾಬ್ದಾರಿ ತನದ ಹೇಳಿಕೆಗಳು, ಜನರ ದಿಕ್ಕು ತಪ್ಪಿಸಿದ್ದರಿಂದ ಹೀನಾಯವಾಗಿ ಸೋಲುವ ಮೂಲಕ ಪಾಠ ಕಲಿತುಕೊಂಡಿದ್ದಾರೆ ಎಂದರು.ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಮಾತನಾಡಿ ದೆಹಲಿ ಚುನಾವಣೆ ಗೆಲುವು ರಾಜ್ಯದಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಗೆ ದಿಕ್ಸೂಚಿ. ರಾಜ್ಯದಲ್ಲಿಯೂ ಕಾಂಗ್ರೆಸ್ ಗೆ ದೆಹಲಿ ಪರಿಸ್ಥಿತಿ ಮರುಕಳಿಸಲಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ. ಮಾಮ್ಕೋಸ್ ಚುನಾವಣೆಯಲ್ಲಿ ಜಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 19 ಸ್ಥಾನಗಳಿಗೂ ಗೆದ್ದು ಸಾಧನೆ ಮಾಡಿದ್ದಾರೆ. ಇನ್ನುಳಿದ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು.
ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕೆ.ಎಂ.ಶ್ರೀನಿವಾಸ್, ಅಂಗುರುಡಿ ದಿನೇಶ್, ಅಂಬಳೂರು ರಾಮಕೃಷ್ಣ, ಹಂಚಲಿ ರಾಘವೇಂದ್ರ, ಹರೀಶ್ ಶೆಟ್ಟಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೆವಿಆರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಘೋಷಣೆ ಕೂಗಿದರು.8 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದಲ್ಲಿ ದೆಹಲಿಯಲ್ಲಿ ಬಿಜೆಪಿ ಗೆಲುವನ್ನು ಸಂಭ್ರಮಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.