ಇಂದು ಹಲವು ಇಲಾಖೆಗಳಲ್ಲಿ ಅದರಲ್ಲೂ ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಸಂಘ ಸಂಸ್ಥೆಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸರ್ಕಾರದಿಂದ ಬಡವರಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಅವುಗಳನ್ನು ಪಡೆಯಲು ಕೆಲ ಸಂಘ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣಗದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇಂದು ಹಲವು ಇಲಾಖೆಗಳಲ್ಲಿ ಅದರಲ್ಲೂ ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಸಂಘ ಸಂಸ್ಥೆಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನು ಮುಂದೆ ತಾಲೂಕಿನ ಯಾವುದೇ ಇಲಾಖೆಯಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಾಗ ನನ್ನನ್ನು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳನ್ನು ಕರೆಸಿ ನೇರವಾಗಿ ಫಲಾನುಭವಿಗೆ ವಿತರಣೆ ಮಾಡುವ ಕೆಲಸ ಆಗಬೇಕು. ಆಗ ಅರ್ಹರಿಗೆ ಸೌಲಭ್ಯ ಸಿಗುವುದರ ಜೊತೆಗೆ ಬೇರೆಯವರಿಗೂ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ದೊರೆಯುತ್ತದೆ ಎಂದರು.

ಬಳಿಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಗ್ಗೆ ಮಾಹಿತಿ ಪಡೆದರು. ಇಲಾಖೆಯ ಅಧಿಕಾರಿ ನವೀನ್ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ತೀವ್ರ ಸಮಸ್ಯೆಯಿಲ್ಲ ಹಾಗೂ ಲಭ್ಯವಿರುವ ಮೂಲಗಳಿಂದಲೇ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನಲ್ಲಿರುವ ಒಟ್ಟು 117 ಘಟಕಗಳ ಪೈಕಿ 100 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 17 ಘಟಕಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಹೊಸದಾಗಿ 8 ಗ್ರಾಮಗಳಿಗೆ ನೀರಿನ ಘಟಕಗಳ ಅಗತ್ಯವಿದೆ ಎಂದು ಸಭೆಯ ಗಮನಕ್ಕೆ ತಂದಾಗ, ಎಲ್ಲಾ ಗ್ರಾಮಗಳಿಗೂ ಹೊಸ ಘಟಕಗಳ ಸ್ಥಾಪನೆಗೆ ಅಗತ್ಯ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ನಂತರ ಶಿಕ್ಷಣ ಇಲಾಖೆಯ ಪ್ರಗತಿಯ ಬಗ್ಗೆ ಚರ್ಚಿಸಿದ ಶಾಸಕರು, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕು ಉತ್ತಮ ಫಲಿತಾಂಶ ದಾಖಲಿಸಲು ಹೆಚ್ಚಿನ ಶ್ರಮ ವಹಿಸಬೇಕು. ಈಗಾಗಲೇ ನಡೆದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಸಮಾಧಾನಕರ ಸಂಗತಿಯಾಗಿದ್ದು, ಪಟ್ಟಣದ ಪಿ.ಎಂ. ಶ್ರೀ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ಸೇರಿದಂತೆ ಕೆಡಿಪಿ ನಾಮ ನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಯಗಳ ಅಧಿಕಾರಿಗಳು ಹಾಜರಿದ್ದರು.

07ಜಿಯುಡಿ1: ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣಗದಲ್ಲಿ ಶಾಸಕ ಸುಬ್ಬಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.