ಕೇಂದ್ರ ಯೋಜನೆಗಳನ್ನು ಜನತೆಗೆ ತಲುಪಿಸಿ

| Published : Sep 11 2024, 01:14 AM IST / Updated: Sep 11 2024, 01:15 AM IST

ಸಾರಾಂಶ

ಬಡಜನರ, ದೀನದಲಿತರ, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತದೆ, ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು,

ಕನ್ನಡಪ್ರಭ ವಾರ್ತೆ ಕೋಲಾರಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು, ಅಂದಾಗ ಮಾತ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ಸಾಮಾನ್ಯ ಜನರಿಗೆ ತಲುಪುತ್ತವೆ, ಇಲ್ಲವಾದಲ್ಲಿ ಕಾಳಜಿಯಿಂದ ಜಾರಿಗೆ ತಂದಿರುವ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು.ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ನೀಡಿರುವ ಅನುದಾನದ ಮಾಹಿತಿ ಜನಸಾಮಾನ್ಯರಿಗೆ ತಿಳಿಯಪಡಿಸಬೇಕು, ಅಂತಹ ಯೋಜನೆಗಳ ಸಂಪೂರ್ಣ ಲಾಭವನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದರು.

ಯೋಜನೆಗಳ ಅನುಷ್ಠಾನಬಡಜನರ, ದೀನದಲಿತರ, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತದೆ, ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು, ಬಡಜನರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರಬೇಕೆಂಬುದೇ ಯೋಜನೆಗಳ ಉದ್ದೇಶ ಎಂದರು.ನೀರು ಪೂರೈಕೆಗೆ ಆದ್ಯತೆ

ಕುಡಿಯುವ ನೀರಿನ ಸೌಲಭ್ಯವು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದ್ದು ಈಗಾಗಲೇ ಮಳೆಗಾಲ ಆರಂಭವಾಗಿದೆ. ಜಿಲ್ಲೆಯಲ್ಲಿ ಮಳೆಯ ನೀರು ಸದ್ಭಳಕೆ ಮಾಡುವ ಕುರಿತು ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆಯಿರುವ ಗ್ರಾಮಗಳ ಹಾಗೂ ಸಮರ್ಪಕವಾಗಿ ನೀರು ದೊರೆಯುವ ಸ್ಥಳಗಳ ಪಟ್ಟಿ ಮಾಡಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸುವ ಒಂದು ತಂಡವನ್ನು ಮಾಡಬೇಕು ಎಂದು ಸೂಚಿಸಿದರು.

ಕೆಸಿ ವ್ಯಾಲಿ ನೀರಿನಿಂದ ರೈತರು ಹಾಳುಕೆ.ಸಿ.ವ್ಯಾಲಿ ನೀರಿನಿಂದ ರೈತರು ಹಾಳಾಗಿದ್ದಾರೆ, ರೈತರ ಬೆಳೆಗಳು ಸರಿಯಾಗಿ ಫಸಲು ಬರುತ್ತಿಲ್ಲ, ೩ನೇ ಹಂತದ ಶುದ್ದಿಕರಣ ಎಲ್ಲಿಗೆ ಬಂತು ಎಂದು ಅಧಿಕಾರಿಗಳನ್ನು ಸಂಸದ ಮಲ್ಲೇಶ್ ಬಾಬು ಸಣ್ಣ ನೀವಾರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಹರಿಕೃಷ್ಣರನ್ನು ತರಾಟೆ ತೆಗೆದುಕೊಂಡರು.

ಆನೇಕಲ್ ಹಾಗೂ ಹೊಸಕೋಟೆಗೆ ಕೆ.ಸಿ.ವ್ಯಾಲಿ ನೀರು ಕೊಡುತ್ತಿರುವುದು ಯಾಕೆ, ಜಿಲ್ಲೆಯ ಮುಳಬಾಗಿಲು ತಾಲೂಕಿಗೆ ಯೋಜನೆ ನೀರು ರೀಚ್ ಆಗಿಲ್ಲ, ಜಿಲ್ಲೆಗೆ ಮಾಡಿದ ಯೋಜನೆಯನ್ನು ಹೊಸಕೋಟೆಗೆ ಕೊಡೋದಕ್ಕ ಇರೋದು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರದ ಹಂತದಲ್ಲಿ ಹೊಸಕೋಟೆಗೆ ನೀರು ಕೊಡುವ ಕುರಿತು ತೀರ್ಮಾನ ಆಗಿದೆಯೇ ಎಂದು ಸ್ಪಷ್ಟನೆ ನೀಡಬೇಕೆಂದರು.

ಕೆಸಿ ವ್ಯಾಲಿ ನೀರು ಕೋಲಾರಕ್ಕಿಲ್ಲ

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕೆ.ಸಿ ವ್ಯಾಲಿ ನೀರನ್ನು ಹೊಸಕೋಟೆಗೆ ಹರಿಸಲಾಗುತ್ತಿದೆ. ಕೋಲಾರ ಜನತೆಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ನಗರದ ಅಮಾನಿ ಕೆರೆಯನ್ನು ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿ ಮಾಡಲಾಗುತ್ತಿದೆ, ಆದರೆ ಮತ್ತೆ ಆ ಸ್ಥಳದಲ್ಲಿ ಜೊಂಡು ಹುಲ್ಲು ಬೆಳೆಯುತ್ತಿದೆ, ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು ಎಂದರು.

ಅಧಿಕಾರಿಗಳಿಗೆ ಮೊಬೈಲ್ ಪ್ರೇಮಕೋಲಾರದ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ಸಂಸದ ಎಂ.ಮಲ್ಲೇಶ್‌ಬಾಬು ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳ ಮೊಬೈಲ್‌ ನೋಡುವಲ್ಲಿ ತಲ್ಲೀನರಾಗಿದ್ದರು. ಕೆಲವರು ಮೊಬೈಲ್ ಫೋನ್ ಮೂಲಕ ಫೋಟೊ ವಿಡಿಯೋ ಹಾಗೂ ಇನ್ನೂ ಕೆಲ ಅಧಿಕಾರಿಗಳು ಮೊಬೈಲ್‌ನ ಸಾಮಾಜಿಕ ಜಾಲ ತಾಣಗಳ ವೀಕ್ಷಣೆಯಲ್ಲಿ ಮುಳುಗಿದ್ದರೆ, ಕೆಲವರು ತೂಕಡಿಸುತ್ತಿದ್ದರು.

ಸಭೆಯಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಕೋಲಾರದ ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಜಂಟಿ ಕೃಷಿ ನಿರ್ದೇಶಕಿ ಸುಮಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಇದ್ದರು.