ಜನರ ಮನೆ ಬಾಗಿಲಿಗೇ ಸೌಲಭ್ಯ ತಲುಪಿಸಿ

| Published : Mar 17 2024, 01:47 AM IST

ಸಾರಾಂಶ

ಗ್ರಾಪಂನಲ್ಲಿ ಅಭಿವೃದ್ಧಿಗೆ ಅನುದಾನದಲ್ಲಿ ಕೊರತೆಯಿಲ್ಲ, ಗ್ರಾಪಂ ಅಧ್ಯಕ್ಷರಿಗೂ ದೇಶದ ರಾಷ್ಟ್ರಪತಿಗಳಿಗೂ ಒಂದೇ ಅಧಿಕಾರವಿರುತ್ತದೆ ಅದನ್ನು ಮೊದಲು ಪಿಡಿಒಗಳು ಅರ್ಥಮಾಡಿಕೊಳ್ಳಬೇಕು. ಅವರನ್ನು ನಿರ್ಲಕ್ಷ್ಯ ಮಾಡಿದರೆ ಪರಿಣಾಮ ಸರಿಇರಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ರೈತರು ಮಹಿಳೆಯರು ಅಭಿವೃದ್ಧಿಯಾದರೆ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಕಾಣಲು ಸಾಧ್ಯ. ಅದಕ್ಕಾಗಿಯೇ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು ಇದರ ಸದುಪಯೋಗ ಪ್ರತಿಯೊಬ್ಬರೂ ಪಡೆಯಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ತಾಲೂಕಿನ ಶೆಟ್ಟಿಕೊತ್ತನೂರು ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆಯ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಯೋಜನೆಯಿಂದ ಸುಮಾರು ೬೪೨ ಲಕ್ಷ ರು.ಗಳ ವೆಚ್ಚದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಮನೆ ಬಾಗಿಲಿಗೇ ಸೌಲಭ್ಯ ತಲುಪಿಸಿ

ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಸುಮಾರು ೧೭೦೦ ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದೆ. ಆದರೂ ಅಲ್ಲಿಂದಲೇ ನೀರು ಪೂರೈಸಿ ಕೃಷಿಗೆ ಪ್ರೋತ್ಸಾಹಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಅನೇಕ ಯೋಜನೆಗಳನ್ನು ರೂಪಿಸಿದ್ದು ಅಧಿಕಾರಿಗಳು ಜನರ ಮನೆಯ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದರು.

ಗ್ರಾಪಂನಲ್ಲಿ ಅಭಿವೃದ್ಧಿಗೆ ಅನುದಾನದಲ್ಲಿ ಕೊರತೆಯಿಲ್ಲ, ಗ್ರಾಪಂ ಅಧ್ಯಕ್ಷರಿಗೂ ದೇಶದ ರಾಷ್ಟ್ರಪತಿಗಳಿಗೂ ಒಂದೇ ಅಧಿಕಾರವಿರುತ್ತದೆ ಅದನ್ನು ಮೊದಲು ಪಿಡಿಒಗಳು ಅರ್ಥಮಾಡಿಕೊಳ್ಳಬೇಕು. ಅವರನ್ನು ನಿರ್ಲಕ್ಷ್ಯ ಮಾಡಿದರೆ ಪರಿಣಾಮ ಸರಿಇರಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ ಪಡೆದು ಪ್ರತಿಯೊಂದು ಕಾರ್ಯಕ್ರಮ ರೂಪಿಸಬೇಕು. ನರೇಗಾ ಸೇರಿದಂತೆ ವಿವಿಧ ಯೋಜನೆಗಳು ಕುರಿತಂತೆ ಪಂಚಾಯತಿ ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಾರ್ವಜನಿಕರಿಗೆ ಮನವರಿಕೆಯ ಜೊತೆಗೆ ಯೋಜನೆಗಳ ಅರಿವು ಮೂಡಿಸಬೇಕು ಎಂದರು.

ಮಣ್ಣು, ನೀರಿನ ಪರೀಕ್ಷೆ ಮಾಡಿಸಿ

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಂತರ್ಜಲ ವೃದ್ಧಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ರೈತರು ತಮ್ಮ ಜಮೀನುಗಳಲ್ಲಿ ಮಣ್ಣಿನ ಮತ್ತು ನೀರಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿ ಅದಕ್ಕೆ ಪೂರಕವಾದ ಅಂಶಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸಬೇಕಾಗಿದೆ, ಜಿಲ್ಲೆಯಲ್ಲಿ ಹೈನುಗಾರಿಕೆ, ರೇಷ್ಮೆ ಇತ್ಯಾದಿಗಳ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಪಡೆದು ಆರ್ಥಿಕ ಅಭಿವೃದ್ಧಿ ಹೊಂದುವಂತಾಗಬೇಕು ಎಂದರು.

ಐದು ಗ್ರಾಪಂ ಆಯ್ಕೆ

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮಾ ಮಾತನಾಡಿ, ಜಲಾನಯನ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಜಿಲ್ಲೆಯ ಕೋಲಾರ ತಾಲೂಕಿನ ಐದು ಪಂಚಾಯಿತಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ, ಅಂತರ್ಜಲವನ್ನು ವೃದ್ಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರೈತರು ಇದರ ಸದುಪಯೋಗ ಮಾಡಿಸಿಕೊಂಡು ಅಧಿಕಾರಿಗಳೊಂದಿಗೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.

ಯಂತ್ರೋಪಕರಣ ವಿತರಣೆ

ಈ ಸಂದರ್ಭದಲ್ಲಿ ಕೃಷಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿದರು. ಮುದುವತ್ತಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಹನುಮಂತಪ್ಪ, ಬೆಗ್ಲಿಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ದೀಪಿಕಾ ಲೋಕೇಶ್, ಅರಾಭಿಕೊತ್ತನೂರು ಗ್ರಾಪಂ ಅಧ್ಯಕ್ಷೆ ರೇಣುಕಾ ಮುನಿರಾಜು, ಕೃಷಿ ಇಲಾಖೆಯ ಭವ್ಯರಾಣಿ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಕಲ್ಲಂಡೂರು ಲೋಕೇಶ್, ಮೈಲಾಂಡಹಳ್ಳಿ ಮುರಳಿ, ನಾಗೇಂದ್ರ, ಅಮರನಾಥ್’ ಮಣ್ಣು ವಿಜ್ಞಾನಿ ಅನಿಲ್ ಕುಮಾರ್ ಪಿಡಿಒ ರವಿ ಇದ್ದರು.