ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಮಂಜೂರಾತಿ ಚೀಟಿ, ಖಾತೆ ತಿದ್ದುಪಡಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು, ತಾಲೂಕಿನ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ರೈತರು ಸಲ್ಲಿಸುವ ಅರ್ಜಿಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಹೆಸರು ಬರಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡದಂತೆ ನೇರವಾಗಿ ತಲುಪಿಸುವ ಕೆಲಸವನ್ನು ಸರ್ಕಾರಿ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಪ್ರಜಾ ಸೇವಾ ಆಂದೋಲನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹಾಗೂ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ಆಗಬೇಕು ಮತ್ತು ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾ ಸೇವಾ ಕಾರ್ಯಕ್ರಮ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸುವುದರ ಜತೆಗೆ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಕಾರ್ಯವಾಗಬೇಕು ಎಂದರು. ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಮಂಜೂರಾತಿ ಚೀಟಿ, ಖಾತೆ ತಿದ್ದುಪಡಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು, ತಾಲೂಕಿನ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ರೈತರು ಸಲ್ಲಿಸುವ ಅರ್ಜಿಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಹೆಸರು ಬರಲು ಸಾಧ್ಯ ಎಂದರು.ಸಭೆಯಲ್ಲಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಾರ್ವಜನಿಕರು ಕಂದಾಯ, ಒಳಚರಂಡಿ, ವಿದ್ಯುತ್ ದೀಪ, ನೀರಾವರಿ, ಪಾರ್ಕಿಂಗ್, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸುಮಾರು 36 ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ. ಸಭೆಯ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ತಲುಪದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಮುಂದಿನ ಸಭೆ ನಡೆಯುವ ಕನಿಷ್ಠ ಒಂದು ವಾರ ಮುಂಚಿತವಾಗಿ ವ್ಯಾಪಕ ಪ್ರಚಾರ ನಡೆಸಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.16 ವರ್ಷಗಳಿಂದ ಬಗೆಹರಿಯದ ರೈತರ ಸಮಸ್ಯೆಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದ ರೈತರಾದ ವಿಜಯ್ ಕುಮಾರ್ ಹಾಗೂ ಯೋಗೇಶ್ ಮಾತನಾಡಿ, 1998–99ನೇ ಸಾಲಿನಲ್ಲಿ ಗ್ರಾಮದ 80 ರೈತರಿಗೆ ಜಮೀನು ಮಂಜೂರಾಗಿದ್ದು, 70 ರೈತರಿಗೆ ಕಂದಾಯ ಇಲಾಖೆಯಿಂದ ಖಾತೆ ಹಾಗೂ ಆರ್‌ಟಿಸಿ ದೊರೆಯುತ್ತಿದೆ. ಆದರೆ ಉಳಿದ 10 ರೈತರಿಗೆ 2010ರಲ್ಲಿ ಮೀಸಲು ಅರಣ್ಯ ಎಂದು ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಕಳೆದ 16 ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಕುರಿತು ಈಗಿನ ಶಾಸಕರು ಸೇರಿದಂತೆ ಹಿಂದಿನ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಹಿಂದಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಾಲೂಕು ಕೇಂದ್ರದಲ್ಲಿ ನಡೆಸಿದ್ದ ಸಭೆಯಲ್ಲಿಯೂ ಮನವಿ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ರೈತರು ತಿಳಿಸಿದರು. ಅದೇ ರೀತಿ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಗೆ ಭೂಮಿ ನೀಡಿರುವ ಈ ರೈತರಿಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈವರೆಗೂ ಅವಾರ್ಡ್ ಮಾಡದೆ ಪರಿಹಾರ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಕುಡಿಯುವ ನೀರಿಗೆ ಆದ್ಯತೆ ನೀಡಿ

ಬಸವನಪುರ, ನರೇನಹಳ್ಳಿ, ಬದ್ದಿಕೆರೆ, ಭುವನಹಳ್ಳಿ, ಹಾಗೂ ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಒಂದನೇ ಬ್ಲಾಕ್ ಬಂಡೆಕೆರೆ ವ್ಯಾಪ್ತಿಯಲ್ಲಿ ಸುಮಾರು 1,000 ಅಡಿ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್ ಹಾಗೂ ಖಾಸಗಿ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಶಾಶ್ವತ ಪರಿಹಾರದ ಯೋಜನೆ ರೂಪಿಸಿ ಕುಡಿಯುವ ನೀರು ಪೂರೈಸುವಂತೆ ಶಾಸಕರು ಸೂಚಿಸಿದರು.ತಹಸೀಲ್ದಾರ್‌ ಶಂಕ್ರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಪ್ರಜಾ ಸೇವಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ ಸ್ಥಳದಲ್ಲಿಯೇ ಪರಿಹಾರ ಪಡೆಯಲು ಅನುಕೂಲವಾಗಲಿದೆ. ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ತಿಂಗಳು ಶನಿವಾರದಂದು ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಜಾ ಸೇವಾ ಆಂದೋಲನ ನಡೆಸಲಾಗುವುದು ಎಂದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ಚೆಸ್ಕಾಂ ಸಹಾಯಕ ಎಂಜಿನಿಯರ್ ವಜ್ರಕುಮಾರ್, ತೋಟಗಾರಿಕಾ ಜಂಟಿ ನಿರ್ದೇಶಕ ಯೋಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಉಪ ತಹಸೀಲ್ದಾರ್‌ ಪೂರ್ಣಿಮಾ, ಕಂದಾಯ ಅಧಿಕಾರಿ ಲತೇಶ್, ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಪುನೀತ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಹರೀಶ್, ಡಾ. ವರದರಾಜು, ಹೋಬಳಿ ಕೃಷಿ ಅಧಿಕಾರಿ ದಿನೇಶ್, ಪಿಎಸ್‌ಐ ಸಂತೋಷ್, ತೋಟಗಾರಿಕಾ ಅಧಿಕಾರಿ ಕಿರಣ್, ಪಿಡಿಒ ಶಿವರಾಂ, ಗಂಗಾಧರ್, ಜ್ಯೋತಿ, ರಾಮಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.