ಸರ್ಕಾರದ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪಿಸಿ

| Published : Nov 14 2024, 12:57 AM IST

ಸಾರಾಂಶ

ಚಿತ್ರದುರ್ಗ: ಕೃಷಿ ಹೊಂಡ, ಬದು ನಿರ್ಮಾಣ, ಹಸುಗಳ ವಿತರಣೆಯಲ್ಲಿ ಅಕ್ರಮವಾಗಿರುವ ಅನುಮಾನ ಬರುತ್ತಿದೆ. ಸರ್ಕಾರದ ಹಣ ಮಧ್ಯವರ್ತಿಗಳ ಪಾಲಾಗಬಾರದು. ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಎಚ್ಚರಿಕೆ ನೀಡಿದರು.

ಚಿತ್ರದುರ್ಗ: ಕೃಷಿ ಹೊಂಡ, ಬದು ನಿರ್ಮಾಣ, ಹಸುಗಳ ವಿತರಣೆಯಲ್ಲಿ ಅಕ್ರಮವಾಗಿರುವ ಅನುಮಾನ ಬರುತ್ತಿದೆ. ಸರ್ಕಾರದ ಹಣ ಮಧ್ಯವರ್ತಿಗಳ ಪಾಲಾಗಬಾರದು. ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ 2024-25 ನೇ ಸಾಲಿನ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ದ್ಯಾಮವ್ವನಹಳ್ಳಿ ಪಂಚಾಯಿತಿಯಲ್ಲಿ ಹಸುಗಳ ವಿತರಣೆಯಲ್ಲಿ ಗೋಲ್‍ಮಾಲ್ ಆಗಿದೆ. ಎಲ್ಲೆಲ್ಲಿ ಏನೇನು ಕಾಮಗಾರಿಗಳು ಆಗಿವೆ. ಎಲ್ಲಿ ಇನ್ನು ಆರಂಭಗೊಂಡಿಲ್ಲ. ವಿಳಂಬವಾಗಲು ಏನು ಕಾರಣ ಎನ್ನುವುದು ಪರಿಶೀಲಿಸಿ ಮುಂದಿನ ಸಭೆಯ ವೇಳೆಗೆ ವರದಿ ನೀಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಒಂದು ಚೀಲ ಶೇಂಗಾ ಬೀಜವನ್ನು ಮೂವರು ರೈತರಿಗೆ ವಿತರಣೆ ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ. ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಆಪಾದನೆಗಳಿವೆ. ಮತ್ತೆ ಇಂತಹ ತಪ್ಪುಗಳು ಮರುಕಳಿಸಬಾರದು. ರೈತರ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.573 ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಗುರಿಯಲ್ಲಿ 243 ಪೂರ್ಣಗೊಂಡಿದೆ. ಉಳಿದವು ಏಕೆ ಆಗಿಲ್ಲ. ರೈಲು ಹಳಿಗೆ ರೈತರ ಎಷ್ಟು ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ ವರದಿ ಕೊಡಿ. ಈಗ ನೀಡಿರುವ ವರದಿ ಸರಿಯಿಲ್ಲ. ನಮ್ಮನ್ನು ಸಮಾಧಾನ ಪಡಿಸಲು ಮನಬಂದಂತೆ ಸಭೆಗೆ ವರದಿ ಕೊಡುವುದು ಬೇಡ. ಸಭೆಗೆ ತಪ್ಪು ಮಾಹಿತಿ ಬೇಕಾಗಿಲ್ಲ. ನೈಜ ಸ್ಥಿತಿಯನ್ನು ತಿಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ತಾಲ್ಲೂಕಿನಾದ್ಯಂತ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ ಎಂದು ಶಾಸಕರು ಪ್ರಶ್ನಿಸಿದಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಇಂಜಿನಿಯರ್ ಉತ್ತರಿಸುತ್ತ 106 ಶುದ್ಧ ಘಟಕದಲ್ಲಿ 81 ಮಾತ್ರ ಸುಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದಾಗ ಉಳಿದವು ಕೆಟ್ಟಿದ್ದರೂ ಏಕೆ ಇದುವರೆವಿಗೂ ರಿಪೇರಿ ಮಾಡಿಸಿಲ್ಲ. ಎಲ್ಲೆಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡಿ ಎಂದು ಕೆ.ಡಿ.ಪಿ.ಸದಸ್ಯರುಗಳಿಗೆ ಶಾಸಕರು ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ಎಲ್ಲಿಯೂ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಪ್ರತಿ ಪಂಚಾಯಿತಿ ಪಿಡಒಗಳು ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ನಡೆಯುವಾಗ ಪೈಪ್‍ಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಪ್ರತಿ ಸಭೆಯಲ್ಲಿಯೂ ನನಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಕೊಡುತ್ತಿಲ್ಲ. ಮುಂದಿನ ಸಭೆಯಲ್ಲಿ ಇಂತಹ ತಪ್ಪು ಮರುಕಳಿಸಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಗರಂ ಆದರು.ರೇಷ್ಮೆ ಬೆಳೆಯುವ ರೈತರಿಗೆ ಮನೆಗೆಳನ್ನು ಮಂಜೂರು ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕು. ನೀವುಗಳೇ ನಿರ್ಧಾರ ತೆಗೆದುಕೊಂಡರೆ ಸಹಿಸುವುದಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನನಗೆ ತಿಳಿಸದೆ ಮನೆಗಳನ್ನು ನೀಡಬಾರದೆಂದು ರೇಷ್ಮೆ ಇಲಾಖೆ ಅಧಿಕಾರಿಗೆ ತರಾಟೆ ತೆಗೆದುಕೊಂಡರು.

ಮಲ್ಲಾಪುರ, ಅನ್ನೇಹಾಳ್, ಸೊಂಡೆಕೊಳ, ಭೀಮಸಮುದ್ರ, ಮೇಗಳಹಳ್ಳಿಯಲ್ಲಿ ಅಡುಗೆ ಕೋಣೆಗಳು ಸರಿಯಿಲ್ಲ. ಮಲ್ಲನಕಟ್ಟೆಯಲ್ಲಿ ಶಾಲೆ ಅರ್ಧಕ್ಕೆ ನಿಂತಿದೆ. ಮಕ್ಕಳಿಗೆ ಏನಾದರೂ ಅನಾಹುತವಾದರೆ ಯಾರು ಹೊಣೆ ? ಅಡುಗೆ ಕೋಣೆಗಳ ಕಾಮಗಾರಿ ಬೇಗ ಮುಗಿಸಿ ಎಂದು ಸೂಚಿಸಿದರು.

ಹತ್ತನೆ ತರಗತಿ ಫಲಿತಾಂಶ ಕಳಪೆಯಾಗಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸುಧಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್‍ರವರನ್ನು ಪ್ರಶ್ನಿಸಿದಾಗ, ಫಲಿತಾಂಶ ಸುಧಾರಣಗೆ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನುರಿತ ಶಿಕ್ಷಕರುಗಳಿಂದ ಮಕ್ಕಳಿಗೆ ಪಾಠಗಳನ್ನು ಬೋಧಿಸಲಾಗುತ್ತಿದೆ ಎಂದು ಉತ್ತರಿಸಿದರು.ಎಲ್ಲೆಲ್ಲಿ ಅಂಗನವಾಡಿ ಕೇಂದ್ರಗಳು ದುಸ್ಥಿತಿಯಲ್ಲಿವೆಯೋ ಅಂತಹುಗಳನ್ನು ಬೇಗನೆ ರಿಪೇರಿ ಮಾಡಿಸಿ. ಕೆಲವು ಕಡೆ ಜಾಗವಿದ್ದರೂ ಇನ್ನು ಏಕೆ ಕಟ್ಟಡಗಳನ್ನು ಆರಂಭಿಸಿಲ್ಲ. ಮುಂದಿನ ಸಭೆಯ ವೇಳೆಗೆ ಎಲ್ಲಾ ಕಟ್ಟಡಗಳನ್ನು ಪೂರ್ಣಗೊಳಿಸಿ ವರದಿ ತರಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಗಡುವು ನೀಡಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಆನಂದ್, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಹಸೀಲ್ದಾರ್ ನಾಗವೇಣಿ ಸಭೆಯ ವೇದಿಕೆಯಲ್ಲಿದ್ದರು.ಕೆಡಿಪಿ ಸದಸ್ಯರುಗಳಾದ ಆನಂದ್, ಸಂತೋಷ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತ್ರೈಮಾಸಿಕ ಸಭೆಯಲ್ಲಿ ಹಾಜರಿದ್ದರು.