ತಾಲೂಕಿನ ಕೆಲವು ಗ್ರಾಮಗಳ ಚಿಕ್ಕ ಚಿಕ್ಕ ಕಿರಾಣಿ ಅಂಗಡಿಗಳಲ್ಲಿ ಮದ್ಯಮಾರಾಟ ನಡೆಯುತ್ತಿದ್ದು, ಏಕೆ ಕ್ರಮ ಕೈಗೊಂಡಿಲ್ಲ. ಏನು ಕೆಲಸ ಮಾಡ್ತಿದ್ದೀರಾ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಪ್ರಶ್ನಿಸಿದರು. ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಅಧಿಕಾರಿಯ ಉತ್ತರಕ್ಕೆ ದೂರು ಬಂದಿಲ್ಲ ಎಂದರೆ ಏನೂ ಮಾಡಲ್ಲವೇ, ಇದುವರೆಗೂ ಯಾವ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೀರಾ, ಎಷ್ಟು ಪ್ರಕರಣ ದಾಖಲಿಸಿದ್ದೀರಾ ಎಂದು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಪಂ ಆವರಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ನಾಲ್ಕೈದು ತಿಂಗಳುಗಳಲ್ಲಿ ತಮ್ಮ ಇಲಾಖಾ ವ್ಯಾಪ್ತಿ ಉತ್ತಮ ಕೆಲಸ ಮಾಡಿದ್ದು, ಕೆಲವೊಂದಿಷ್ಟು ಇಲಾಖೆಗಳು ಮಾತ್ರ ನಿರೀಕ್ಷಿಸಿದಷ್ಟು ಗುರಿ ತಲುಪುವಲ್ಲಿ ವಿಫಲರಾಗಿದ್ದಾರೆ. ಅಂಥ ಇಲಾಖೆಗಳ ಪ್ರತ್ಯೇಕ ಸಭೆ ನಡೆಸಿ, ಕ್ರಿಯಾ ಯೋಜನೆ ಸಿದ್ಧಪಡಿಸಿ ಗುರಿ ತಲುಪುವ ಕೆಲಸ ಮಾಡಲಿದ್ದೇವೆ. ಪ್ರಮುಖವಾಗಿ ಪೋಡಿ ಅಭಿಯಾನದಲ್ಲಿ ೩೦೦ ಬ್ಲಾಕ್‌ಗಳಲ್ಲಿ ಪೋಡಿ ಮಾಡಿ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಫಲಾನುಭವಿಗಳಿಗೆ ಪೋಡಿ ಮಾಡಿ ಹಕ್ಕು ಪತ್ರ ನೀಡಬೇಕಿದೆ. ಇದಕ್ಕೆ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು. ತಾಲೂಕಿನಲ್ಲಿ ೨೫೦೦ ಜನ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು ಸಮರ್ಪಕವಾಗಿ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಪಡಿತರ ಚೀಟಿ ವಿತರಣೆ ಮಾಡಲಿದ್ದೇವೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ೮ ತಿಂಗಳುಗಳಿಂದ 477 ಗರ್ಭಿಣಿಯರು ಪ್ರಸವ ಹೊಂದಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಸಂಖ್ಯೆ ಒಂದೇ ತಿಂಗಳಲ್ಲಿ ದಾಟಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಅನುಮಾನವನ್ನು ಹೋಗಲಾಡಿಸಬೇಕು ಎಂದು ಸೂಚಿಸಿದರು.

ಸ್ಥಳೀಯರಿಗೆ ಉದ್ಯೋಗ ಕೊಡಿಸಿ: ತಾಲೂಕಿನಲ್ಲಿರುವ ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಅನ್ಯ ರಾಜ್ಯದವರಿಗೆ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಮೊದಲು ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕಾರ್ಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿ, ಇಲ್ಲದಿದ್ದರೆ ನಾನೇ ಅವರೊಂದಿಗೆ ಸಭೆ ನಡೆಸಿ ಸೂಚನೆ ಕೊಡುತ್ತೇನೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ

ತಾಲೂಕಿನ ಕೆಲವು ಗ್ರಾಮಗಳ ಚಿಕ್ಕ ಚಿಕ್ಕ ಕಿರಾಣಿ ಅಂಗಡಿಗಳಲ್ಲಿ ಮದ್ಯಮಾರಾಟ ನಡೆಯುತ್ತಿದ್ದು, ಏಕೆ ಕ್ರಮ ಕೈಗೊಂಡಿಲ್ಲ. ಏನು ಕೆಲಸ ಮಾಡ್ತಿದ್ದೀರಾ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಪ್ರಶ್ನಿಸಿದರು. ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಅಧಿಕಾರಿಯ ಉತ್ತರಕ್ಕೆ ದೂರು ಬಂದಿಲ್ಲ ಎಂದರೆ ಏನೂ ಮಾಡಲ್ಲವೇ, ಇದುವರೆಗೂ ಯಾವ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೀರಾ, ಎಷ್ಟು ಪ್ರಕರಣ ದಾಖಲಿಸಿದ್ದೀರಾ ಎಂದು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.

ತಹಸೀಲ್ದಾರ್ ಸೋಮಶೇಖರ್, ಡಿವೈಎಸ್ಪಿ ಮಲ್ಲೇಶ್, ತಾಪಂ ಇಒ ಮುನಿಯಪ್ಪ, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಜೆ.ಬಚ್ಚೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.