ಸಾರಾಂಶ
ಗೃಹಜ್ಯೋತಿ ಯೋಜನೆ ಒಳಪಡದೇ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕು.
ಕನಕಗಿರಿ:
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಘಟಕದ ಅಧ್ಯಕ್ಷ ಹಜರತ್ ಹುಸೇನ್ ಮುಜಾವರ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಒಳಪಡದೇ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಯೋಜನೆ ಕುರಿತಂತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಲು ನಿರ್ದೇಶಿಸಿದರು.
ಸಾರಿಗೆ ಇಲಾಖೆ ಗಂಗಾವತಿ ವಿಭಾಗದ ಡಿಪೋ ವ್ಯವಸ್ಥಾಪಕ ಸತತವಾಗಿ ನಾಲ್ಕು ಸಭೆಗಳಿಗೆ ಗೈರಾಗಿ ಅವರ ಅಧೀನ ಸಿಬ್ಬಂದಿಯನ್ನು ನಿಯೋಜನೆಗೊಳಿಸಿ ಸಭೆಗೆ ಕಳುಹಿಸಿದ್ದರಿಂದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಇನ್ಮುಂದೆ ಜರುಗುವ ಪ್ರಗತಿ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಇದೇ ವೇಳೆ ಕನಕಗಿರಿ ಉತ್ಸವಕ್ಕೆ ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು. ಯುವನಿಧಿ ಯೋಜನೆ ಕುರಿತು ಉತ್ಸವದಲ್ಲಿ ಹೆಚ್ಚಿನ ಪ್ರಚಾರ ಮಾಡಿ ಸಂಬಂಧಿಸಿದ ಇಲಾಖೆಯಿಂದ ಉದ್ಯೋಗ ಮೇಳ ಆಯೋಜಿಸಲು ತಿಳಿಸಿದರು.
ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ ಗ್ಯಾರಂಟಿ ತಲುಪಿಸುವ ದಿಸೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಯಾವ ಫಲಾನುಭವಿಯೂ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.ಈ ವೇಳೆ ತಾಪಂ ಇಒ ಕೆ. ರಾಜಶೇಖರ್, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ತಾಲೂಕು ಸದಸ್ಯರು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.