ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿಯೊಬ್ಬ ನಾಗರಿಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಠಾನಗೊಳಿಸಲಾಗಿರುವ ಯೋಜನೆಗಳನ್ನು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಸಭೆಯಲ್ಲಿ ಮಾತನಾಡಿ, ಬ್ಯಾಂಕುಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ಬ್ಯಾಂಕ್‌ಗಳ ಸೇವೆ ಸ್ಮರಣೀಯವಾಗಿರುತ್ತದೆ. ಸರ್ಕಾರದ ಪ್ರತಿಯೊಂದು ಸೌಲಭ್ಯವು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುಂತಾಗಬೇಕು. ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ನಿಲುಕುವಂತೆ ಸರಳಗೊಳಿಸಿ ನೀಡಬೇಕು ಎಂದು ತಿಳಿಸಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಬ್ಯಾಂಕುಗಳಲ್ಲಿ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲ, ಶಿಕ್ಷಣ ಸಾಲ, ವಸತಿ ಯೋಜನೆಯಡಿ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದರು.ಬ್ಯಾಂಕ್‌ಗಳ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. 260 ಬ್ರಾಂಚ್‌ಗಳಲ್ಲಿ ಮಾತ್ರ ಡಿಎಲ್‌ಸಿಸಿ ಸಭೆ ಆಗಿದೆ. 85 ಬ್ರಾಂಚ್‌ಗಳಲ್ಲಿ ಆಗಿಲ್ಲ. ನಿಯಮಿತವಾಗಿ ಸಭೆಗಳನ್ನು ಕೈಗೊಂಡು ಕ್ರಮ ವಹಿಸಬೇಕೆಂದು ತಿಳಿಸಿದರು.
ಮಾ.24 ರಿಂದ 26 ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪಿಎಂ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಏರ್ಪಡಿಸಲಾಗಿದ್ದು ಇಲ್ಲಿ ಒಟ್ಟು 50 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಫಲಾನುಭವಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಬ್ಯಾಂಕುಗಳು ಕೈಜೋಡಿಸಬೇಕು ಎಂದರು.
ಕೆನರಾ ಬ್ಯಾಂಕ್ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ದೇವರಾಜ್ ಆರ್ ಮಾತನಾಡಿ, 2025 ರ ಡಿಸೆಂಬರ್ ಅಂತ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಶೇ.74.26 ಪ್ರಗತಿ ಸಾಧನೆ ಮಾಡಿದ್ದು 2024 ನೇ ಸಾಲಿಗಿಂತ ಶೇ.31.26 ಪ್ರಗತಿ ಸಾಧಿಸಲಾಗಿದೆ. ಎಂಎಸ್‌ಎಂಇ ವಲಯದಲ್ಲಿ ಶೇ.80.03 ಪ್ರಗತಿ ಸಾಧಿಸಿದ್ದು, 2024 ನೇ ಸಾಲಿಗಿಂತ ಶೇ.11.49 ಹೆಚ್ಚು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಬ್ಯಾಂಕುಗಳು ಪ್ರಧಾನಮಂತ್ರಿ ವಿಶ್ವಕರ್ಮ, ಮುದ್ರಾ ಸೇರಿದಂತೆ ಪಿಎಂ ಸಾಲ/ಸೌಲಭ್ಯ ನೀಡುವ ಯೋಜನೆಗಳಡಿ ಬಂದಂತಹ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಮಂಜೂರು ಮಾಡಬೇಕು ಎಂದರು.ಹಣಕಾಸು ಸಾಕ್ಷರತಾ ಕೇಂದ್ರ(ಎಫ್‌ಎಲ್‌ಸಿ)ಗಳು ಹಾಗೂ ಸೆಂಟರ್ ಫಾರ್ ಫೈನಾನ್ಶಿಯಲ್ ಲಿಟರಸಿಗಳು ಪರಿಣಾಮಕಾರಿಯಾಗಿ ಆಯ್ದ ಸ್ಥಳಗಳಲ್ಲಿ ಶಿಬಿರಗಳನ್ನು, ಸಭೆಗಳನ್ನು ನಡೆಸಿ ಬ್ಯಾಂಕ್ ಖಾತೆ ತೆರೆಯುವುದು, ವಿವಿಧ ಯೋಜನೆಗಳು ಸೇರಿದಂತೆ ಹಣಕಾಸು ವಿಷಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಪಿಎಂ ಫಾರ್ಮಲೈಸೇಷನ್ ಆಫ್ ಮೈಕ್ರೊ ಫುಡ್ ಪ್ರಾಸೆಸಿಂಗ್ ಎಂಟರ್‌ಪ್ರೆöÊಸಸ್ ಯೋಜನೆಯಡಿ ಶಿವಮೊಗ್ಗಕ್ಕೆ 200 ಗುರಿ ನೀಡಲಾಗಿದ್ದು 114 ಸಾಧನೆ ಸಾಧಿಸಿದ್ದು, ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು.ಪಿಎಂಇಜಿಪಿ, ಪಿಎಂ ಸೂರ್ಯ ಘರ್ ಪಿಎಂ ಎಫ್‌ಎಂಇ ಯೋಜನೆಯಡಿ 15 ಫಲಾನುಭವಿಗಳಿಗೆ ಶಾಮಿಯಾನ, ರೋಟಿ ಮೇಕರ್, ಶಿಕ್ಷಣಕ್ಕೆ ಸಂಬಂಧಿಸಿದ ಸಾಲದ ಚೆಕ್‌ನ್ನು ವಿತರಿಸಲಾಯಿತು.
ಸಭೆಯಲ್ಲಿ ಆರ್‌ಬಿಐ ಲೀಡ್ ಜಿಲ್ಲಾ ಅಧಿಕಾರಿ ಸೂರಜ್ ಎಸ್, ನಬಾರ್ಡ್ ಜಿಲ್ಲಾ ಅಭಿವೃದ್ದಿ ಪ್ರಬಂಧಕ ಶರತ್ ಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.