ಸಾರಾಂಶ
- ವಾಲ್ಮೀಕಿ ಸಮಾಜದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ರಾಜನಹಳ್ಳಿ ಶ್ರೀ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಗತ್ತಿಗೆ ರಾಮಾಯಣದಂಥ ಮಹಾನ್ ಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಮೂಲಕ ರಾಜ್ಯ ಸರ್ಕಾರ ಗೌರವ ಸಮರ್ಪಿಸುತ್ತಿದೆ. ವಾಲ್ಮೀಕಿ ಜಯಂತಿಯನ್ನು ಕೇವಲ ಸಾಂಕೇತಿಕವಾಗಿ ಆಚರಿಸುವುದಕ್ಕಷ್ಟೇ ಸರ್ಕಾರಗಳು ಸೀಮಿತವಾಗಬಾರದು. ವಾಲ್ಮೀಕಿ ನಾಯಕ ಸಮಾಜಕ್ಕೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕೆಲಸ ಮಾಡಬೇಕು ಎಂದು ಹರಿಹರ ತಾಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನುಡಿದರು.ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ರಾಜಾ ವೀರ ಮದಕರಿ ನಾಯಕ ವೃತ್ತದಲ್ಲಿ ವಾಲ್ಮೀಕಿ ಸಮಾಜದಿಂದ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಗೆ ಮದಕರಿ ನಾಯಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಬದ್ಧವಾಗಿ ವಾಲ್ಮೀಕಿ ನಾಯಕ ಸಮಾಜಕ್ಕೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ಸರ್ಕಾರ ತಲುಪಿಸುವ ಜೊತೆಗೆ ಸಂವಿಧಾನಬದ್ಧ ಹಕ್ಕುಗಳಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ನಾಯಕ ಸಮಾಜದವರಲ್ಲದ ತಳವಾರ ಹೆಸರಿನ ಜಾತಿಯವರು ವಾಲ್ಮೀಕಿ ನಾಯಕ ಜನಾಂಗದ ಎಸ್‌ಸಿ, ಎಸ್‌ಟಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಸುಳ್ಳು ಮಾಹಿತಿ ನೀಡಿ, ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಯಲು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಇಡೀ ಜಗತ್ತಿಗೆ ರಾಮಾಯಣವನ್ನು ಕಟ್ಟಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಜಯಂತಿ ಅ.17ರಂದು ನಡೆಯಲಿದೆ. ಅದರ ಮುನ್ನಾ ದಿನ ಜನಜಾಗೃತಿಗಾಗಿ ಈ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ರಾಜನಹಳ್ಳಿ ಶ್ರೀ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಪ್ರತಿ ವರ್ಷದಂತೆ ಬೈಕ್ ರ್ಯಾಲಿಗೆ ಚಾಲನೆ ನೀಡಿ, ಸ್ವತಃ ದ್ವಿಚಕ್ರ ವಾಹನ ಚಾಲನೆ ಮೂಲಕ ಸಮಾರಂಭದ ಯಶಸ್ಸಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಸಮಾಜದ ಹಿರಿಯರು, ತಾಯಂದಿರು, ವಿದ್ಯಾರ್ಥಿಗಳು, ಯುವಕ-ಯುವತಿಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಸಮಾಜದ ಯುವ ಮುಖಂಡ ಟಿ.ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿದರು. ರಾಜಾ ವೀರ ಮದಕರಿ ನಾಯಕ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿಯು ವಿವಿಧ ರಸ್ತೆಗಳಲ್ಲಿ ಸಾಗಿ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ ಮುಕ್ತಾಯಗೊಂಡಿತು.
ಸಮಾಜದ ಕಾರ್ಯದರ್ಶಿ ಶ್ಯಾಗಲೆ ಕೆ.ಆರ್.ಮಂಜುನಾಥ, ಹದಡಿ ಹಾಲೇಶಪ್ಪ, ಆರ್.ಎಸ್.ಶೇಖರಪ್ಪ, ವಕೀಲ ಎನ್.ಎಂ.ಆಂಜನೇಯ ಗುರೂಜಿ, ಮಾಜಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಪ್ರವೀಣ ಶಾಮನೂರು, ಹದಡಿ ರಾಜಣ್ಣ, ಹುಲ್ಮನಿ ಪ್ರವೀಣ, ಹುಲ್ಮನಿ ಗಣೇಶ, ಅಜಯ ಸಿಂಹ, ಫಣಿಯಾಪುರ ಲಿಂಗರಾಜ, ನರೇಂದ್ರ, ಬಸವರಾಜ ತೋಟದ, ಜಗದೀಶ, ಅಣಜಿಗೆರೆ ಮಲ್ಲಿಕಾರ್ಜುನ, ಬಸವರಾಜ, ಕರಿಬಸಪ್ಪ ಆನಗೋಡು, ಪರಶುರಾಮ, ಪ್ರವೀಣ ಹೂವಿನಮಡು, ಗೋಶಾಲೆ ಸುರೇಶ, ಸತೀಶ, ಶಶಿ ಶ್ರೀಕಂಠಪುರ, ಪರಶುರಾಮ ಕೆಟಿಜೆ ನಗರ, ಶ್ಯಾಗಲೆ ಮಂಜುನಾಥ ಇತರರು ಬೈಕ್ ರ್ಯಾಲಿಯಲ್ಲಿ ಇದ್ದರು.- - - -(ಫೋಟೋ ಬರಲಿವೆ):