ರಾಜ್ಯದಲ್ಲಿ ಮೆಕ್ಕೆಜೋಳದ ಬೆಳೆದ ರೈತರ ಸಂಕಷ್ಟಕ್ಕೆ ಧಾವಿಸಿ, ₹250 ಸಹಾಯಧನ ನೀಡಿರುವ ರಾಜ್ಯ ಸರ್ಕಾರವು, ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಸಹಾಯಧನ ವರ್ತಕರ ಪಾಲಾಗುತ್ತದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆತಂಕ ವ್ಯಕ್ತಪಡಿಸಿದ್ದಾರೆ.

- ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಮೆಕ್ಕೆಜೋಳದ ಬೆಳೆದ ರೈತರ ಸಂಕಷ್ಟಕ್ಕೆ ಧಾವಿಸಿ, ₹250 ಸಹಾಯಧನ ನೀಡಿರುವ ರಾಜ್ಯ ಸರ್ಕಾರವು, ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಸಹಾಯಧನ ವರ್ತಕರ ಪಾಲಾಗುತ್ತದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ₹250 ಸಹಾಯಧನ ನೀಡಿದ್ದರಿಂದ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿರುವ ರೈತರು ತಮ್ಮ ಹೆಸರಿನ ಪಹಣಿ ಯಾವುದೇ ಕಾರಣಕ್ಕೂ ಖರೀದಿದಾರರು, ದಲ್ಲಾಳಿಗಳು, ಕಂಪನಿ ಮಾಲೀಕರು, ಇತರೆ ವರ್ತಕರಿಗೆ ನೀಡಬಾರದು ಎಂದರು.

ಈಗಾಗಲೇ ಎಪಿಎಂಸಿ ಮಾರುಕಟ್ಟೆಗೆ ತಮ್ಮ ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೂ ಸರ್ಕಾರ ನೀಡುವ ₹250 ಸಹಾಯಧನ ಸಿಗಬೇಕು. ಜಿಲ್ಲೆಯ ಎಲ್ಲಾ ಉಗ್ರಾಣಗಳಲ್ಲಿರುವ ಮೆಕ್ಕೆಜೋಳ ದಾಸ್ತಾನುಗಳನ್ನು ಎಪಿಎಂಸಿ ಅಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆದು ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳ ಎಥೆನಾಲ್ ನೀತಿಯನ್ವಯ ಎಥೆನಾಲ್ ಉತ್ಪಾದನೆ ಮಾಡುವ ಕಂಪನಿಗಳು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಖರೀದಿಸುವಂತಿಲ್ಲ. ಆದರೂ, ಎಥೆನಾಲ್ ಉತ್ಪಾದಕರು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸುತ್ತಿದ್ದಾರೆ. ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಎನ್‌ಎಫ್‌ಇಡಿ, ಎನ್‌ಸಿಸಿಎಫ್‌ನಿಂದಷ್ಟೇ ಅಂತಹವರು ಖರೀದಿಸಬೇಕು ಎಂದರು.

ರಾಜ್ಯ ಸರ್ಕಾರ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ, ರೈತರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿದ ಕಂಪನಿಗಳಿಂದ ವ್ಯತ್ಯಾಸದ ಹಣ ವಾಪಸ್‌ ಕೊಡಿಸಬೇಕು. ರಾಜ್ಯ ಸರ್ಕಾರವು ಕೇಂದ್ರವು ಘೋಷಿರುವ ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ರಾಜ್ಯಮಟ್ಟಕ್ಕೆ ಜಾರಿಗೆ ತರಬೇಕು. ರೈತರಿಗೆ ಅನುಕೂಲ ಆಗುವಂತೆ ರೈತರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮೆಕ್ಕೆಜೋಳಕ್ಕೆ ₹2400 ಸಿಗುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಂಘಟನೆ ಮುಖಂಡರಾದ ಹೂವಿನಮಡು ನಾಗರಾಜ, ಹೊಸಳ್ಳಿ ಮೋಹನಕುಮಾರ, ಚಿನ್ನಸಮುದ್ರ ಸುರೇಶ, ಹಾವಲ್ ನಾಯ್ಕ ಇತರರು ಇದ್ದರು.

- - -

-6ಕೆಡಿವಿಜಿ6:

ದಾವಣಗೆರೆಯಲ್ಲಿ ಮಂಗಳವಾರ ಹುಚ್ಚವ್ವನಹಳ್ಳಿ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.