ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಫಲಾನುಭವಿ ಆಧಾರಿತ ಯೋಜನೆಗಳಡಿ ರೈತರಿಗೆ ನ್ಯಾಯಯುತ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಲೋಕಾಯುಕ್ತರಾದ ನ್ಯಾ. ಬಿ.ಎಸ್.ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಫಲಾನುಭವಿ ಆಧಾರಿತ ಯೋಜನೆಗಳಡಿ ರೈತರಿಗೆ ನ್ಯಾಯಯುತ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಲೋಕಾಯುಕ್ತರಾದ ನ್ಯಾ. ಬಿ.ಎಸ್.ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿನ ಕೃಷಿ ಇಲಾಖೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಅವರು, ರೈತರು ಸೌಲಭ್ಯ ಕೋರಿ ಬಂದಾಗ ತಕ್ಷಣ ಅವರಿಗೆ ನೆರವಾಗಬೇಕು. ಸಕಾಲಕ್ಕೆ ಸೌಲಭ್ಯ ದೊರೆಯದ ಸಂದರ್ಭದಲ್ಲಿ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗುವುದರಿಂದ ರೈತರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಕಾಡಂಗೇರಾ ಗ್ರಾಮದ ರೈತ ತಿಪ್ಪಣ್ಣ ಎಂಬುವವರು ಅಮರೇಶ್ವರ ಹಾಗೂ ರಾಘವೇಂದ್ರ ಎಂಟರ್‌ಪ್ರೈಸಿಸ್ ನಲ್ಲಿ 14ಎಕರೆ ಜಮೀನಿಗಾಗಿ ತಲಾ 700 ರು.ಗೆ ಒಂದು ಪ್ಯಾಕೇಟ್‌ರಂತೆ ಖರೀದಿಸಿದ ಬಿ.ಟಿ. ಹತ್ತಿ ಬೀಜ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದರಿಂದ, ಆ ರೈತ ತೀವ್ರ ಬೆಳೆನಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಇನ್ನೂವರೆಗೆ ಏಕೆ ಕ್ರಮ ಆಗಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ವಿಚಾರಿಸಿ, ಈ ಕುರಿತು ತಕ್ಷಣ ಪರಿಶೀಲನಾ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.ಶಹಾಪುರ ಕೃಷಿ ಸಹಾಯಕ ನಿರ್ದೇಶಕರು ಸಹ ದೂರವಾಣಿ ಮೂಲಕ ವಿಜ್ಞಾನಿಗಳಿಂದ ತನಿಖೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆಯೂ ಪರಿಶೀಲಿಸಿ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ತಿಳಿಸಿದ ಅವರು ರೈತರಿಗೆ ಸ್ಪ್ರೀಂಕ್ಲರ್, ಇತರೆ ಕೃಷಿ ಸಲಕರಣೆಗಳು ಹಾಗೂ ಫಲಾನುಭವಿ ಆಧಾರಿತ ಯೋಜನೆಗಳಡಿ ನೀಡಿದ ಸೌಲಭ್ಯಗಳ ಬಗ್ಗೆ ಹೆಸರು, ಗ್ರಾಮವಾರು ಹೆಸರು ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.ನಂತರ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು ಅಧಿಕಾರಿಗಳು ವಸತಿ ನಿಲಯಗಳಿಗೆ ನಿರಂತರ ಭೇಟಿ ನೀಡುವ ಜೊತೆಗೆ ಕೈಗೊಂಡ ಕ್ರಮ, ಆಯಾ ವಸತಿ ನಿಲಯ ಅಧಿಕಾರಿಗಳಿಗೆ ನೀಡಿದ ಸೂಚನೆ ನಮೂದಿಸಿ ದಾಖಲೀಕರಣಗೊಳಿಸಬೇಕು. ವಸತಿ ನಿಲಯಗಳ ಸ್ವಚ್ಛತೆ, ಮೂಲಸೌಕರ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಬೇಕು. ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಲು ಅವರು ಸೂಚಿಸಿದರು.
ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು ಕಾರ್ಮಿಕರಿಗೆ ಸಕಾಲಕ್ಕೆ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರನ್ನು ಮದ್ಯಪಾನದಿಂದ ದೂರ ಇರುವಂತೆ ಜಾಗೃತಿ ಮೂಡಿಸಬೇಕು. ಕಾರ್ಮಿಕರಿಗೆ ಲೇಬರ್ ಕಾರ್ಡ್, ಆರೋಗ್ಯ ವಿಮೆ ಸೌಲಭ್ಯ ತಪ್ಪಿ ಹೋಗದಂತೆ ನೋಡಿಕೊಳ್ಳಲು ಅವರು ಸೂಚಿಸಿದರು.ಈ ಸಂದರ್ಭದಲ್ಲಿ ಅಪರ ನಿಬಂಧಕರು-ವಿಚಾರಣೆ ರಮಾಕಾಂತ್ ಚೌವ್ಹಾಣ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಲೋಕಾಯುಕ್ತ ಎಸ್ಪಿ ಸಿದ್ದರಾಜು ಉಪಸ್ಥಿತರಿದ್ದರು.
6ವೈಡಿಆರ್5ರಾಜ್ಯ ಲೋಕಾಯುಕ್ತರು ನ್ಯಾಯಮೂರ್ತಿ ಬಿ. ಎಸ್.ಪಾಟೀಲ್ ಅವರು, ನಗರದ ಜಿಲ್ಲಾಡಳಿತ ಭವನದಲ್ಲಿನ ಕೃಷಿ ಇಲಾಖೆ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ರೈತರ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.