ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗೆ ತಲುಪಿಸುವಲ್ಲಿ ವಿನಾಕಾರಣ ವಿಳಂಬವಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಯೋಜನೆಗಳ ಅನುಷ್ಠಾನಕ್ಕಾಗಿ ಸಂಬಂಧಿತ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಬಸ್ ನಿಲ್ದಾಣಗಳು ಸ್ವಚ್ಛವಾಗಿರುವಂತೆ ಕ್ರಮ ವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳು ಇರುವಂತೆ ಗಮನ ಹರಿಸಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕುಗಳಲ್ಲಿಯೂ ಗ್ಯಾರಂಟಿ ಶಿಬಿರ, ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನದ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಸೌಲಭ್ಯದಿಂದ ಯಾವುದೇ ಫಲಾನುಭವಿ ವಂಚಿತರಾಗಬಾರದು. ಗೃಹಲಕ್ಷ್ಮೀ ಯೋಜನೆಯ ಹಣ ಅರ್ಹ ಫಲಾನುಭವಿಗಳಿಗೆ ತಲುಪಿರುವ ಕುರಿತು ಸಮೀಕ್ಷೆ ಕಾರ್ಯ ನಡೆಸಬೇಕು. ಅನ್ನಭಾಗ್ಯ ಯೋಜನೆಯ ಸೌಲಭ್ಯ ಫಲಾನುಭವಿಗಳಿಗೆ ತಲಪುವುಲ್ಲಿ ವಿಳಂಬವಾಗಬಾರದು. ಕೆಎಸ್‌ಆರ್‌ಟಿಸಿ ಎಲ್ಲ ಘಟಕಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಮುಖ್ಯಸ್ಥರು ಅವುಗಳ ಸಮರ್ಪಕ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಬೇಕು. ಅರ್ಹರಿಗೆ ಯೋಜನೆಗಳ ಸೌಲಭ್ಯ ನಿಗದಿತ ಅವಧಿಯೊಳಗೆ ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಿದ ಅವರು, ಸರ್ಕಾರದ ಸೌಲಭ್ಯಗಳ ಮೂಲಕ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದೀಪಕ ಲಮಾಣಿ ಮಾತನಾಡಿದರು. ಈ ವೇಳೆ ಹೆಸ್ಕಾಂನಿಂದ ವಿದ್ಯುತ್ ಕಂಬಗಳ ಅಳವಡಿಕೆ, ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕುರಿತು ಚರ್ಚಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳ ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.ಸಭೆಯಲ್ಲಿ ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ಸಂಗನಗೌಡ ಪಾಟೀಲ, ಷರೀಫ್ ಬಿಳಿಯಲಿ, ವಿವೇಕ ಯಾವಗಲ್, ದೇವಪ್ಪ ಮುರ್ನಾಳ, ಪುಲಕೇಶಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಈಶಣ್ಣ ಹುನಸೀಕಟ್ಟಿ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದೇವರಮಠ, ಚಳಗೇರಿ ಸೇರಿದಂತೆ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಇದ್ದರು.