ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸಿ

| Published : Jul 01 2024, 01:45 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಭೆ ನಡೆಯಿತು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿಯ ಅಧ್ಯಕ್ಷ, ಸದಸ್ಯರ ಸಭೆಯಲ್ಲಿ ಶ್ರೇಣಿಕ್‌ ಧೋಖಾ ಸೂಚನೆ

ಕನ್ನಡಪ್ರಭ ವಾರ್ತೆ ಯಾದಗಿರಿರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶ್ರೇಣಿಕ ಕುಮಾರ ಧೋಖಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ಮಾತನಾಡಿ, ಅನುಷ್ಠಾನ ಸಮಿತಿಯ ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಯೋಜನೆ ತಲುಪಿದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ತಾಂತ್ರಿಕ ಸಮಸ್ಯೆಯಿಂದ ಯೋಜನೆಯ ಸದುಪಯೋಗ ಪಡೆಯದ ಜನರ ಅಗತ್ಯ ದಾಖಲೆ ಪಡೆದು ಯೋಜನೆ ಮುಟ್ಟುವಂತೆ ನೋಡಿಕೊಳ್ಳಬೇಕು ಎಂದರು.

ಅನ್ನಭಾಗ್ಯ ಯೋಜನೆ: ಪ್ರತಿ ತಿಂಗಳು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ಕಾರ್ಡಗೆ 35 ಕೆಜಿ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯ ಜೊತೆಗೆ 5 ಕೆಜಿ ಆಹಾರ ಧಾನ್ಯ ಬದಲಾಗಿ 170 ರು. ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗುತ್ತಿದೆ ಎಂದರು.

ಜುಲೈ2023 ರಿಂದ ಏಪ್ರಿಲ್-2024 ರ ಅಂತ್ಯದವರೆಗೆ 2,69,529 ಒಟ್ಟು ಪಡಿತರ ಚೀಟಿ ಸಂಖ್ಯೆ ಇದ್ದು, ಅದರಲ್ಲಿ ಒಟ್ಟು ಪಡಿತರ ಚೀಟಿ ಸದಸ್ಯರ ಸಂಖ್ಯೆ 9,99,925 ಇದ್ದು, ಅವರಲ್ಲಿ 2,32,093 ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.ಸ್ತ್ರೀ ಶಕ್ತಿ ಯೋಜನೆ: ಸ್ತ್ರೀ ಶಕ್ತಿ ಯೋಜನೆಯಡಿ ಮೇ 26. 2023 ರಿಂದ ಜೂ.2024ರ ವರೆಗೆ ಮಹಿಳೆಯರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗದ ಬಸ್‌ಗಳಲ್ಲಿ ಪ್ರಯಾಣಿಸಿದ ಹಾಗೂ ಸಾರಿಗೆ ಆದಾಯದ ವಿವರವು, ಯಾದಗಿರಿ ಘಟಕದ ಯಾದಗಿರಿ-ಶಹಾಪುರ-ಗುರುಮಠಕಲ್‌-ಸುರಪುರ ಮಹಿಳೆಯರು 2,43,79, 633, ಮಕ್ಕಳು 8,58,302 ಸೇರಿ ಒಟ್ಟು 2,52,37,935 ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ.

-ಗೃಹಜ್ಯೋತಿ ಯೋಜನೆ: ಒಟ್ಟು ಸ್ಥಾವರಗಳು 1,54,065 ಇದ್ದು ನೋಂದಣಿಯಾದ ಸ್ಥಾವರಗಳು 1,45,821 ಆಗಿದ್ದು ಶೇ. 94 ರಷ್ಟು ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.

-ಗೃಹಲಕ್ಷ್ಮಿಯೋಜನೆ: ಆ.2023 ರಿಂದ ಮೇ.2024ರ ವರೆಗೆ ಒಟ್ಟು ನೋಂದಣಿ 2,45,039 ಆಗಿದ್ದು, 1,94,039 ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

-ಯುವ ನಿಧಿ ಯೋಜನೆ:ಯುವನಿಧಿ ಯೋಜನೆಯ ಅರ್ಹ ಅಭ್ಯರ್ಥಿಗಳಿಗೆ ಸೇವಾ ಸಿಂಧುಪೋರ್ಟಲ್ ನ ಅರ್ಜಿ ಆಹ್ವಾನಿಸಿ ಸರ್ಕಾರದಿಂದ ಡಿ.2023 ರಂದು ವಿದ್ಯುಕ್ತವಾಗಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇಲ್ಲಿಯವರೆಗೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 4,510 ಅರ್ಜಿಗಳು ಸ್ವೀಕೃತವಾಗಿವೆ ಎಂದು ತಿಳಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಖಾರಿ, ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಹಂತಹಂತವಾಗಿ ಅದರ ಸದುಪಯೋಗ ಪಡೆಯುವ ಬಗೆ ವಿವರಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸದಸ್ಯ, ಕಾರ್ಯದರ್ಶಿಯಾದ ಎಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಉಪಾಧ್ಯಕ್ಷ ಸ್ಯಾಮ್ಸನ್ ಮಾಳಿಕೇರಿ, ಬಸವರಾಜ ಬಿಳ್ಹಾರ, ರಮೇಶ ದೊರೆ, ವೀರಭದ್ರಪ್ಪ ಯಡ್ಡಳ್ಳಿ, ಹಳ್ಳೆಪ್ಪ ಹವಾಲ್ದಾರ್, ಯಾದಗಿರಿ ತಾಲೂಕು ಅಧ್ಯಕ್ಷ ಬಸವರಾಜಪ್ಪ ಬಂಗಾಲಿ ರಾಮಸಮುದ್ರ, ಶಹಾಪುರ ತಾಲೂಕು ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಸುರಪುರ ಅಧ್ಯಕ್ಷ ಬಸಲಿಂಗಪ್ಪ ಬಾದ್ಯಪುರ, ಹುಣಸಗಿ ಅಧ್ಯಕ್ಷ ಕೃಷ್ಣ ಎಚ್. ಜಾಧವ್, ವಡಗೇರಾ ಅಧ್ಯಕ್ಷ ಖಾಜಾ ಮೈನುದ್ದೀನ್ ಮಿರ್ಚಿ ನಾಯ್ಕಲ್, ಗುರುಮಠಕಲ್ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇತರರಿದ್ದರು.