ಲಕ್ಷ್ಮೇಶ್ವರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ಸರಿಯಾಗಿ ಮುಟ್ಟಿಸುವ ಕೆಲಸ ಆಗಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ತಿಳಿಸಿದರು.

ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾತ್ರೋ ರಾತ್ರಿ ಲಾರಿಗಳಲ್ಲಿ ಅನ್ನ ಭಾಗ್ಯದ ಅಕ್ಕಿ ಸಾಗಾಟ ಆಗುತ್ತಿದೆ. ಅದನ್ನು ತಡೆಗಟ್ಟುವ ಕೆಲಸ ಆಗಬೇಕು. ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅನ್ನಬಾಗ್ಯ ಯೋಜನೆಯನ್ನು ವೃದ್ಧರಿಗೆ ಮನೆಗೆ ಹೋಗಿ ಮುಟ್ಟಿಸಿ, ಸಾರ್ವಜನಿಕರೊಂದಿಗೆ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಗ್ಯಾರಂಟಿ ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಮಾತನಾಡಿ, ನ್ಯಾಯಬೆಲೆ ಅಂಗಡಿಯವರು ಜನರಿಗೆ ಯೋಜನೆ ಅನ್ನಭಾಗ್ಯ ಅಕ್ಕಿಯನ್ನು ಸರಿಯಾಗಿ ಮುಟ್ಟಿಸಲು ನ್ಯಾಯಬೆಲೆಯ ಅಂಗಡಿಯವರಿಗೆ ಅಧಿಕಾರಿಗಳು ಅವರಿಗೆ ತಿಳಿಹೇಳಿ ಎಂದರು.

ಸದಸ್ಯೆ ಶಶಿಕಲಾ ಬಡಿಗೇರ ನ್ಯಾಯಬೆಲೆ ಅಂಗಡಿ ಅಕ್ಕಿಯಲ್ಲಿ ಗಾಜು, ಕಸ ಕಡ್ಡಿ ಬರುತ್ತಿದ್ದು, ಇದನ್ನು ಸರಿಪಡಿಸಿ ಎಂದರು. ಯುವನಿಧಿ ಯೋಜನೆ ವಿದ್ಯಾರ್ಥಿಗಳಿಗೆ ಮುಟ್ಟಿಸಲು ನಗರ ಹಾಗೂ ಗ್ರಾಪಂಗಳಲ್ಲಿ ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯವಾಗಿದೆ. ಮುಂದೆ ಮಳೆಗಾಲವಿದ್ದು, ಹೆಸ್ಕಾಂ ಇಲಾಖೆಯವರು ವಿದ್ಯುತ್ ಸಮಸ್ಯೆ ಆಗದಂತೆ ಹಾಗೂ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.


ಪಟ್ಟಣದ ಸಾರಿಗೆ ಇಲಾಖೆಗೆ ಹೆಚ್ಚಿನ ಆದಾಯವಿದ್ದರೂ ಬಸ್‌ಗಳು ಅಲ್ಲಲ್ಲಿ ಬಸ್ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಬಸ್‌ಗಳನ್ನು ಸರಿಪಡಿಸಿ, ಬಸ್ ನಿಲ್ದಾಣ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ತಾಪಂ ಇಒ ಮಂಜುಳಾ ಹಕಾರಿ, ಎಡಿ ಧರ್ಮರ, ಕೃಷ್ಣಪ್ಪ ಇದ್ದರು. ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ಬೇರಿ, ಹೆಸ್ಕಾಂನ ಆಂಜನಪ್ಪ, ಆಹಾರ ಇಲಾಖೆ ಜಗದೀಶ್ ಕುರುಬರ, ಸಾರಿಗೆ ಇಲಾಖೆಯ ಅಶೋಕ, ಪಂಚ ಗ್ಯಾರಂಟಿ ಸಮಿತಿ ಸದಸ್ಯ ರಮಜಾನ ಸಾಬ್ ನದಾಫ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಖಾದರಸಾಬ್ ರಿತ್ತಿ, ಹಸನಸಾಬ್ ಜಂಗ್ಲಿ ಇದ್ದರು.