ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶರಣರ ಸಂದೇಶಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ ಮಾಡಲಿ. ಬಸವಾದಿ ಪ್ರಮಥರು ರಚಿಸಿರುವ ವಚನಗಳು ಅತ್ಯಮೂಲ್ಯವಾಗಿದ್ದು, ಅವುಗಳಲ್ಲಿ ನಮ್ಮ ಬದುಕಿನ ಸಾರ ಅಡಗಿವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ. ಹಿರೇಮಠ ನುಡಿದರು.

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರವಿರುವ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುತ್ತೂರು ಶ್ರೀಗಳಿಂದ ಸ್ಥಾಪಿತವಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಂದು ಬೆಳೆದು ಹೆಮ್ಮರವಾಗಿದೆ. ನಾನೂ ಸೇರಿ ದಿ.ಪರಮಾನಂದ ಮಸ್ಕಿ, ದಿ.ಎಚ್.ಆರ್. ಕಲಕೇರಿ, ಚಂದ್ರಶೇಖರ ಇಟಗಿ ಹಾಗೂ ಬಸವರಾಜ ನಾಲತವಾಡ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಬೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚಂದ್ರಶೇಖರ ನಾಗರಾಳ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ತಮ್ಮ ತಂದೆ, ತಾಯಿ ಅಥವಾ ಸಂಬಂಧಿಕರ ಸ್ಮರಣೆಗಾಗಿ ದಾನಿಗಳು ಕೊಟ್ಟ ದತ್ತಿನಿಧಿ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸುವ ಕಾರ್ಯ ಅಧ್ಯಕ್ಷರದಾಗಿರುತ್ತೆ, ಆ ನಿಟ್ಟಿನಲ್ಲಿ ನಿಮ್ಮ ತಂಡ ಕಾರ್ಯತತ್ಪರವಾಗಲಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ, ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ಇದ್ದಷ್ಟು ಕಾಲ ಜನಮೆಚ್ಚುವ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ. ಖುರ್ಚಿಯ ಹಿಂದೆ ನಾವು ಹೋಗಬಾರದು, ನಮ್ಮ ಹಿಂದೆ ಖುರ್ಚಿ ಬರಬೇಕು, ಪರಿಷತ್ತಿನ ಆಶೋತ್ತರಗಳನ್ನು ಈಡೇರಿಸುವ ಕಾರ್ಯಗಳನ್ನು ನೂತನ ಪದಾಧಿಕಾರಿಗಳು ಮಾಡಲಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಿಸಿದ ಮತ್ತೋರ್ವ ಅತಿಥಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಮಾತನಾಡಿ, ಶರಣರ ವಚನಗಳ ಸಾರವನ್ನು ಜನರಿಗೆ ಮುಟ್ಟಿಸಿ, ಮನಪರಿವರ್ತನೆ ಮಾಡುವ ಪವಿತ್ರ ಕಾರ್ಯವನ್ನು ಪರಿಷತ್ತು ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಪರಿಷತ್ತಿನ ಹಿಂದಿನ ಅಧ್ಯಕ್ಷ ಬಸವರಾಜ ನಾಲತವಾಡ ಮಾತನಾಡಿ, ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಾಗರಾಳ ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ಸಂಗಣ್ಣ ಕಂಚ್ಯಾಣಿ ಗೌರವಾಧ್ಯಕ್ಷರಾಗಿ,ಚಂದ್ರಶೇಖರ ನಾಗರಾಳ ಅಧ್ಯಕ್ಷ ರಾಗಿ, ಬಾಪುಗೌಡ ಪಂ.ಪಾಟೀಲ, ಪ್ರೊ.ಆರ್.ಎಚ್. ಸಜ್ಜನ ಹಾಗೂ ಸಂಗಮೇಶ ಶಿವಣಗಿ ಉಪಾಧ್ಯಕ್ಷರಾದ ಜಿ.ಎಸ್. ಹಂಡರಗಲ್ಲ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಎ. ಬೇವಿನಗಿಡದ , ಕೋಶಾಧ್ಯಕ್ಷರಾಗಿ ಎ.ಬಿ.ಗುಡಗುಂಟಿ, ಎನ್.ಆರ್. ಮೊಕಾಶಿ ಸಹಕಾರ್ಯದರ್ಶಿಗಳಾಗಿ ಎಂ.ಬಿ.ಪಾಟೀಲ, ಎಚ್.ಬಿ. ದಳವಾಯಿ, ಸಂಘಟನಾ ಕಾರ್ಯದರ್ಶಿಗಳಾಗಿ ಎಸ್.ಆರ್.ಗೌಡರ, ಶ್ರೀಶೈಲ ಕಟ್ಟಿ ದತ್ತಿ, ಸಂಚಾಲಕರಾಗಿ,ಬಿ.ಎಸ್. ಮೇಟಿ, ಬಸವರಾಜ ಲಿಂಗದಳ್ಳಿ, ಶಿವನಗೌಡ ಲಿಂಗದಳ್ಳಿ, ರವಿ ಬಿರಾದಾರ, ಸಿದ್ಧನಗೌಡ ಕಾಶಿನಕುಂಟಿ, ಭೀಮಣ್ಣ ಹಡಪದ ಮತ್ತು ವಿರೇಶ ಢವಳಗಿ ಕಾರ್ಯಕಾರಿ ಸಮೀತಿಯ ಸದಸ್ಯರುಗಳಾಗಿ ಪದಗ್ರಹಣ ಮಾಡಿದರು. ಕಾಶಿಬಾಯಿ ರಾಂಪೂರ ಕದಳಿವೇದಿಕೆಯ ಅಧ್ಯಕ್ಷರಾಗಿ ಹಾಗೂ ಸಿದ್ಧನಗೌಡ ಬಿಜ್ಜೂರ ಯುವಘಟಕದ ಅಧ್ಯಕ್ಷರಾಗಿ ಮುಂದುವರಿದರು.

ಎಂ.ಜಿ.ವ್ಹಿ.ಸಿ.ವಿಶ್ವಸ್ಥನಿಧಿಯ ಕಾರ್ಯದರ್ಶಿ ಅಶೋಕ ತಡಸದ, ಎಂ.ಎಸ್. ಬಿರಾದಾರ, ಬಿ.ಎಂ. ರಾಂಪೂರ, ಬಿ.ಎನ್. ಚೌಡಾಪೂರ, ಪ್ರೊ.ಪ್ರಕಾಶ ನರಗುಂದ, ಅಮರಣ್ಣ ಬಿರಾದಾರ, ಸದಾಶಿವ ಮಾಗಿ, ಬಿ.ಎಸ್. ಪಾಟೀಲ, ಬಿಜೆಪಿ ಧುರಿಣ ಪ್ರಭು ಕಡಿ, ಪ್ರೊ.ಉಪ್ಪಲದಿನ್ನಿ, ಡಾ.ಎಸ್.ವ್ಹಿ. ಒಡ್ಡೊಡಗಿ, ಸಾಹಿತಿ ರುದ್ರೇಶ ಕಿತ್ತೂರಮಲ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಹಿಂದಿನ ಹಾಗೂ ಹಾಲಿ ಪರಿಷತ್ತಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸಂಗಣ್ಣ ಶಿವಣಗಿ ಪ್ರಾರ್ಥಿಸಿದರು, ಸಿ.ಜಿ. ನಾಗರಾಳ ಪ್ರಾಸ್ತವಿಕವಾಗಿ ಮಾತನಾಡಿದರು. ಎಸ್.ಎ. ಬೇವಿನಗಿಡದ ಸ್ವಾಗತಿಸಿದರು, ಎಂ.ಬಿ. ಪಾಟೀಲ ವಂದಿಸಿದರು, ಬಿ.ವಿ. ಕೋರಿ ನಿರೂಪಿಸಿದರು.