ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಯೋಜನೆಗಳ ಸೌಲಭ್ಯ ಸಿಗುವಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್ ಅವರು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಮೊದಲನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜೆಜೆಎಂ ಗುಣಮಟ್ಟ, ವೇಗ ಅವಶ್ಯ
ದೇಶದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಕಲ್ಪಿಸುವ ದೃಷ್ಟಿಯಿಂದ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿಗಳ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕಾಮಗಾರಿ ವಿಳಂಬ ಹಾಗೂ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಜತೆಗೆ ಜೆಜೆಎಂ ಕಾಮಗಾರಿಗೆ ಬಳಸುತ್ತಿರುವ ಪೈಪ್ ಗುಣಮಟ್ಟ ಪರಿಶೀಲಿಸಿ ನಿಯಮಾನುಸಾರ ಗುಣಮಟ್ಟ ಪರಿಶೀಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಗರ ಪ್ರದೇಶದಲ್ಲಿ ಶೇಕಡ ೭೯% ಪ್ರಗತಿ ಸಾಧಿಸಲಾಗಿದೆ. ನಿರ್ಮಾಣ ಹಂತದ ಮನೆಗಳು, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಸೂಚನೆ ನೀಡಿ, ನಿವೇಶನ ಹಾಗೂ ವಸತಿ ರಹಿತ ಫಲಾನುಭವಿಗಳ ಪಟ್ಟಿಯ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ತ್ಯಾಜ್ಯ ನಿರ್ವಹಣಾ ಘಟಕಗಳು ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ. ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ಒಣ ಕಸ ಹಸಿ ಕಸ ವಿಂಗಡಣೆ ಜತೆಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದರ ಮೂಲಕ ಕಸ ವಿಲೇವಾರಿ ಘಟಕಗಳ ಸದ್ಬಳಕೆ ಆಗಬೇಕು ಎಂದು ಹೇಳಿದರು.ಗರ್ಭಿಣಿ ಬಾಣಂತಿಯರ ಕಾಳಜಿ ಮಾಡಿ
ಬಾಲ್ಯವಿವಾಹ ಹಾಗೂ ಪೊಕ್ಸೋ ಪ್ರಕರಣಗಳು ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆ ಜತೆಗೆ ಪೋಲಿಸ್ ಇಲಾಖೆ ಜಂಟಿಯಾಗಿ ಕಾರ್ಯಪ್ರವೃತರಾಗಿ ಕೆಲಸ ಮಾಡಬೇಕು. ಜಿಲ್ಲೆಯ ವ್ಯಾಪ್ತಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ನೋಂದಣಿ ಪ್ರಕ್ರಿಯೆ ೧೦೦% ರಷ್ಟು ಮಾಡಿಸಿ, ಸರ್ಕಾರದ ಸೌಲಭ್ಯವನ್ನು ಪಡೆಯುವಂತೆ ಜಾಗೃತಿ ಮೂಡಿಸಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರದ ಪೂರೈಕೆಯಾಗಬೇಕು. ಯಾವೊಬ್ಬ ಗರ್ಭಿಣಿಯರು ಹಾಗೂ ಮಕ್ಕಳು ಅಪೌಷ್ಟಿಕತೆಗೆ ಒಳಗಾಗದಂತೆ ಗಮನ ಹರಿಸಬೇಕು.ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಪ್ರಸ್ತಾವನೆ, ಅನುದಾನ, ಕಾಮಗಾರಿ ಹಾಗೂ ಇನ್ನಿತರ ಬಾಕಿ ಇರುವ ಕೆಲಸಗಳ ಬಗ್ಗೆ ಸಂಬಂಧಪಟ್ಟ ಆಯಾ ಇಲಾಖೆಗಳು ವರದಿ ಸಿದ್ಧಪಡಿಸಿ ಮಾಹಿತಿ ನೀಡಿ , ವರದಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕಾರ್ಯ ರೂಪಕ್ಕೆ ತರುವಲ್ಲಿ ಕೆಲಸ ಮಾಡಲಾಗುವುದು ಎಂದರು.
ಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ, ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ರವಿ, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.