ಸಾರಾಂಶ
ಧಾರವಾಡ:
ಸರ್ಕಾರಗಳು ಜನರ ಕಲ್ಯಾಣ, ರಾಜ್ಯದ ಅಭಿವೃದ್ಧಿಗಾಗಿ ಅನೇಕ ಯೋಜನೆ ರೂಪಿಸಿ ಸೌಲಭ್ಯ ನೀಡುತ್ತವೆ. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಿ ಸರ್ಕಾರದ ಬಗ್ಗೆ ವಿಶ್ವಾಸ, ಸದಾಭಿಪ್ರಾಯವನ್ನು ಅಧಿಕಾರಿಗಳು ಮೂಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ವಿ. ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ, ಹೋಬಳಿ, ತಾಲೂಕು ಮಟ್ಟದ ಅಧಿಕಾರಿಗಳು ಜನರೊಂದಿಗೆ ನಿರಂತರ ಸಮರ್ಪಕದಲ್ಲಿ ಇದ್ದು ಸರ್ಕಾರ ಜಾರಿಗೊಳಿಸುವ ಯೋಜನೆಗಳು ಕುರಿತು ಮಾಹಿತಿ ನೀಡಬೇಕೆಂದು ಸೂಚಿಸಿದರು.ಅನುದಾನ ಲ್ಯಾಪ್ಸ್ ಆಗಬಾರದು:
ಪ್ರಸಕ್ತ ಸಾಲಿನ ಕಾಮಗಾರಿ, ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನವಾಗಬೇಕು. ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆದರೆ ಆಯಾ ಅಧಿಕಾರಿ ಹೊಣೆ ಮಾಡಲಾಗುವುದು. ಯಾವುದೇ ನಿಯಮ ಉಲ್ಲಂಘಿಸದೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳ ತಂಡ ತಾಲೂಕು, ಘಟಕವಾರು ಕಾಮಗಾರಿ, ಕಾರ್ಯಕ್ರಮ ಪರಿಶೀಲಿಸಿ ತಮ್ಮ ಕಚೇರಿಗೆ ಪ್ರತಿ ತಿಂಗಳು ವರದಿ ಸಲ್ಲಿಸಬೇಕೆಂದು ನಿರ್ದೇಶಿಸಿದರು.ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರದ ವಿಸ್ತೀರ್ಣವಾಗಬೇಕು. ಅಧಿಕಾರಿಗಳು ಬರೀ ಕಾಗದದಲ್ಲಿ ಪ್ರಗತಿ ಕಾಣಿಸಿದರೆ ಸಾಲದು, ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತೆ ಬದಲಾವಣೆ ಆಗಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತಕ್ಕೆ ಅಭಿನಂದನೆ:ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತುರ್ತಾಗಿ ಮುಗಿಸಿ ರಾಜ್ಯದಲ್ಲಿ ಮೊದಲಿಗರಾಗಿದ್ದು, ರಾಜ್ಯ ಸರ್ಕಾರದಿಂದ ಮೊದಲ ಹಂತದ ಪರಿಹಾರವು ಬಿಡುಗಡೆ ಆಗಿದೆ. ಜನಪರ, ರೈತ ಪರವಾಗಿ ಬೆಳೆಹಾನಿ ಸಮೀಕ್ಷೆ, ಪೊರ್ಟಲ್ ಎಂಟ್ರಿ ಕಾರ್ಯವನ್ನು ತುರ್ತಾಗಿ ಮಾಡಿದಕ್ಕೆ ಅಭಿನಂದನೆ ತಿಳಿಸಿದ ಅವರು, ರೈತರಿಗೆ ಹಂತ-ಹಂತವಾಗಿ ಪರಿಹಾರ ಜಮೆ ಮಾಡಲು ತುರ್ತಾಗಿ ಕ್ರಮವಹಿಸಬೇಕೆಂದು ಸೂಚಿಸಿದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಆಗಿದ್ದು ಈ ವರ್ಷ ಇನ್ನು ಉತ್ತಮವಾಗಬೇಕು. ವಿವಿಧ ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆ 100ರಷ್ಟು ಫಲಿತಾಂಶ ಪಡೆಯಬೇಕು. 2025ರ ಫಲಿತಾಂಶಕ್ಕಿಂತ ಶೇ.10ರಷ್ಟು ಫಲಿತಾಂಶ ಸುಧಾರಣೆ ಆಗದಿದ್ದರೆ ನಿಲಯಪಾಲಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವ ಜತೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.ಸಮೀಕ್ಷೆ ಯಶಸ್ವಿಗೊಳಿಸಿ:
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಉತ್ತಮವಾಗಿ ನಡೆದಿದೆ. ಆದರೂ ಪೂರ್ಣ ಪ್ರಮಾಣದ ಗುರಿ ಸಾಧಿಸಿಲ್ಲ. ಅ. ೧೮ರ ವರೆಗೆ ಮಾತ್ರ ಸಮೀಕ್ಷೆಗೆ ಕಾಲಾವಕಾಶವಿದ್ದು ಸಮೀಕ್ಷೆ ಗ್ರಾಮೀಣ ಭಾಗದಲ್ಲಿ ತೃಪ್ತಿದಾಯಕವಾಗಿದ್ದು, ನಗರ ಪ್ರದೇಶದಲ್ಲಿ ಕುಂಠಿತವಾಗಿದೆ. ಸಮೀಕ್ಷೆ ನಿರೀಕ್ಷಿತಮಟ್ಟದಲ್ಲಿ ಪ್ರಗತಿ ಸಾಧಿಸಿದ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳು ಸ್ವತಃ ಭೇಟಿ ನೀಡಿ, ಸ್ಥಳೀಯ ತೊಂದರೆ ಪರಿಹರಿಸಬೇಕು ಎಂದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿದ್ದು ೯೭ ಸಾವಿರ ಹೆಕ್ಟೇರ್ ಬೆಳೆಹಾನಿಗೆ ₹ ೮೫ ಕೋಟಿ ಮೊತ್ತದ ಪರಿಹಾರ ಅಗತ್ಯವಿದೆ. ಈಗಾಗಲೇ ₹ ೨೨ ಕೋಟಿ ಪರಿಹಾರ ಹಣ ಬಿಡುಗಡೆ ಆಗಿದ್ದು, ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.