ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ!

| Published : Jan 20 2024, 02:00 AM IST / Updated: Jan 20 2024, 02:14 PM IST

Baby

ಸಾರಾಂಶ

ಕಲಬುರಗಿಯ ಮೊರಾರ್ಜಿ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ 

ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಇತ್ತೀಚೆಗಷ್ಟೇ (ಜ.11ರಂದು) ಚಿಕ್ಕಬಳ್ಳಾಪುರದ ಮಧುಗಿರಿಯ ಸರ್ಕಾರಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಾರ್ಡನ್‌ರನ್ನು ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನಕುಮಾರ ರಾಜು ಆದೇಶ ಹೊರಡಿಸಿದ್ದಾರೆ. 

ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡುವ ತನಕ ಯಾಕೆ ಯಾರೂ ಗಮನಿಸಿಲ್ಲ? ಇದು ಪ್ರಾಚಾರ್ಯರು ಹಾಗೂ ವಾರ್ಡನ್‌ ನಿರ್ಲಕ್ಷ್ಯ. ಹೀಗಾಗಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿದೆ. 

ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ, ಪ್ರಾಚಾರ್ಯರ ಅಮಾನತು ಆದೇಶ ಖಂಡಿಸಿ ವಿದ್ಯಾರ್ಥಿಗಳು ಶುಕ್ರವಾರ ವಸತಿ ಶಾಲೆಯ ಗೇಟ್‌ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಸ್ಥಳಕ್ಕೆ ತಹಸೀಲ್ದಾರ್‌ ಸಂಜೀವಕುಮಾರ ದಾಸರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ನಾಯಕ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. 

ಪ್ರಾಚಾರ್ಯರು ಮತ್ತು ವಾರ್ಡನ್‌ ಒಳ್ಳೆಯವರು. ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ಅಮಾನತು ಆದೇಶ ರದ್ದುಪಡಿಸಬೇಕು. ಅವರು ಬರುವ ತನಕ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ, ತಹಶೀಲ್ದಾರ್‌ ಅವರ ಮನವೊಲಿಕೆ ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು.