ದಾವಣಗೆರೆ: ಭ್ರಷ್ಟ, ವಕ್ಫ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Jan 14 2024, 01:32 AM IST / Updated: Jan 14 2024, 05:55 PM IST

ದಾವಣಗೆರೆ: ಭ್ರಷ್ಟ, ವಕ್ಫ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕು ಮಲೆಬೆನ್ನೂರಿನ ಜಾಮೀಯ ಮಸೀದಿಯಲ್ಲಿ 1.97 ಕೋಟಿ ರು. ಅಧಿಕ, ಹೊನ್ನಾಳಿ ಪಠಾಣ್ ವಾಡಿ ಮಸೀದಿಯಲ್ಲಿ 16.57 ಲಕ್ಷ ರು. ಅಧಿಕ ಹಾಗೂ ಸಾಸ್ವೇಹಳ್ಳಿಯ ಜಾಮೀಯಾ ಮಸೀದಿಯಲ್ಲಿ ಆದ ಹಣದ ದುರ್ಬಳಕೆ ಬಗ್ಗೆ ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಬೇಕು.

ದಾವಣಗೆರೆ: ಹರಿಹರ ತಾಲೂಕು ಮಲೆಬೆನ್ನೂರಿನ ಜಾಮೀಯ ಮಸೀದಿಯಲ್ಲಿ 1.97 ಕೋಟಿ ರು. ಅಧಿಕ, ಹೊನ್ನಾಳಿ ಪಠಾಣ್ ವಾಡಿ ಮಸೀದಿಯಲ್ಲಿ 16.57 ಲಕ್ಷ ರು. ಅಧಿಕ ಹಾಗೂ ಸಾಸ್ವೇಹಳ್ಳಿಯ ಜಾಮೀಯಾ ಮಸೀದಿಯಲ್ಲಿ ಆದ ಹಣದ ದುರ್ಬಳಕೆ ಬಗ್ಗೆ ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ನಾಡು ಜನತಾ ಸಮಿತಿ ಅಧ್ಯಕ್ಷ, ಮುಸ್ಲಿಂ ಸಮಾಜದ ಮುಖಂಡ ದಸ್ತಗೀರ್ ಎಸ್.ಅಸಾದುಲ್ಲಾ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆಬೆನ್ನೂರಿನ ಜಾಮೀಯಾ ಮಸೀದಿಯಲ್ಲಿ ಮಾಜಿ ಆಡಳಿತಾಧಿಕಾರಿ ಅವಧಿಯಲ್ಲಿ 1,97,28,593 ರು. ಗೂ ಅಧಿಕ ಅವ್ಯವಹಾರವಾಗಿದ್ದು, ಅಷ್ಟೂ ಹಣ‍ವನ್ನು ವಸೂಲಿ ಮಾಡಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದರು.

ಹೊನ್ನಾಳಿ ಪಠಾಣ್ ವಾಡಿ ಮಸೀದಿಯಲ್ಲಿ ಮಾಜಿ ಸಮಿತಿಯವರು 16,57,217 ರು. ಹಾಗೂ ಸಾಸ್ವೇಹಳ್ಳಿ ಜಾಮೀಯಾ ಮಸೀದಿಯಲ್ಲಿ ಹಣ ದುರ್ಬಳಕೆಯಾಗಿದೆ. ಪ್ರತಿಭಟನೆ ನಡೆಸಿದರೂ ಯಾವುದೇ ಸ್ಪಂದನೆ ಇಲ್ಲ. ಎಫ್ಐಆರ್‌ ದಾಖಲಿಸದೇ ಇರುವುದು ವಕ್ಫ್ ಟ್ರಿಬ್ಯುನಲ್‌ ಆದೇಶದ ನೇರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಶಾಸಕರ ಅನುದಾನದಲ್ಲಿ ಮಲೆಬೆನ್ನೂರು ಜುಮ್ಮಾ ಮಸೀದಿ ಅಭಿವೃದ್ಧಿಗೆ 5 ಲಕ್ಷ ರು. ಸರ್ಕಾರದಿಂದ ಲ್ಯಾಂಡ್ ಆರ್ಮಿಗೆ ಬಿಡುಗಡೆಯಾಗಿತ್ತು. ಆಗ ಆಡಳಿತಾಧಿಕಾರಿಯಾಗಿದ್ದವರು, ಲ್ಯಾಂಡ್ ಆರ್ಮಿ ಇಂಜಿನಿಯರ್‌ಗಳು ಸೇರಿಕೊಂಡು, ತಪ್ಪು ದಾಖಲಾತಿಗಳನ್ನು ಸೃಷ್ಟಿಸಿ, ಕಾಮಗಾರಿಯನ್ನೇ ಮಾಡದೇ, ಬೋಗಸ್ ಬಿಲ್ ಸೃಷ್ಟಿಸುವ ಮೂಲಕ ಸರ್ಕಾರ ಹಣ ಲಪಟಾಯಿಸಲು ಸಂಚು ಮಾಡಿದ್ದರು.

 ದೂರಿನ ಅನ್ವಯ ಶಾಸಕರ ನಿರ್ದೇಶನದ ಮೇರೆಗೆ ಸದ್ಯ ಬಿಲ್ ತಡೆ ಹಿಡಿಯಲಾಗಿದೆ. ಆಡಳಿತಾಧಿಕಾರಿ ಹಾಗೂ ಲ್ಯಾಂಡ್ ಆರ್ಮಿ ಇಂಜಿನಿಯರ್ ಸೇರಿ, ದಾಖಲೆಗಳನ್ನು ಇಲಾಖೆಗೆ ನೀಡಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜುಮ್ಮಾ ಮಸೀದಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಾರ್ವಜನಿಕರಿಂದ ಸುಮಾರು 40 ಲಕ್ಷ ರು.ಗಳಷ್ಟು ಚಂದಾ ಸಂಗ್ರಹಿಸಿದ ಹಣಕ್ಕೆ ರಸೀದಿಯನ್ನು ನೀಡಿಲ್ಲ. ಸಮಾಜಕ್ಕೂ ಹಣದ ಲೆಕ್ಕವನ್ನು ನೀಡದೇ, ವಂಚಿಸಲಾಗಿದೆ. 

ಬ್ಯಾಂಕ್‌ನಲ್ಲಿ ಮಸೀದಿ ಖಾತೆಯಿಂದ 35 ಲಕ್ಷ ರು. ಡ್ರಾ ಮಾಡಿಕೊಂಡು, ಬೋಗಸ್ ಬಿಲ್ ಸೃಷ್ಟಿಸಿ, ಲೆಕ್ಕ ಪರಿಶೋಧಕರಿಗೂ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಸಿಮೆಂಟ್‌, ಕಬ್ಬಿಣ, ಮಾರ್ಬಲ್‌ ಕಲ್ಲುಗಳು ಮಾರಾಟ ಮಾಡಿ, ಸಂಸ್ಥೆಯ ಖಾತೆಗೆ ಜಮಾ ಮಾಡದೇ, ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. 

ದಾಖಲೆ ಸಮೇತ ದೂರು ನೀಡಿದರೂ ವಕ್ಫ್ ಅಧಿಕಾರಿ ರಾಜ್ಯ ವಕ್ಫ್ ಮಂಡಳಿಗೂ ವರದಿ ಮಾಡದೇ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.

ಮಸೀದಿ ಹೆಚ್ಚುವರಿ ಆಸ್ತಿಗಳಾದ ವಾಣಿಜ್ಯ ಮಳಿಗೆಗಳಲ್ಲಿ ಒಂದೇ ಕುಟುಂಬಕ್ಕೆ 7 ಮಳಿಗೆಗಳನ್ನು ನೀಡಿದ್ದು, ಮುಂಗಡ ಹಣ ಇಲ್ಲದಿದ್ದರೂ 1 ಲಕ್ಷ ರು. ಹಣ ವಾಪಾಸ್ ನೀಡಲಾಗಿದೆ. 1.15 ಲಕ್ಷ ರು. ಬಾಡಿಗೆ ಇದ್ದು, ಹತ್ತಿರದ ಸಂಬಂಧಿಗೆ ಅಕ್ರಮವಾಗಿ ಮಳಿಗೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ. 

ಮಸೀದಿ ಮಾಜಿ ಸಿಬ್ಬಂದಿ, ಮಾಜಿ ವ್ಯವಸ್ಥಾಪಕ, ಮಾಜಿ ಆಡಳಿತಾಧಿಕಾರಿ, ವಕ್ಫ್ ಅಧಿಕಾರಿ ಕಾನೂನು ಬಾಹಿರವಾಗಿ ಹಣ ಡ್ರಾ ಮಾಡಿಕೊಟ್ಟಿದ್ದಾರೆ. ಶಾದಿ ಮಹಲ್‌ ನಿರ್ಮಾಣದಲ್ಲೂ ಭ್ರಷ್ಟಾಚಾರವಾಗಿದೆ. ಮಲೆಬೆನ್ನೂರು, ಹೊನ್ನಾಳಿ, ಸಾಸ್ವೇಹಳ್ಳಿ ಮಸೀದಿ ಆಸ್ತಿ, ಹಣಕಾಸು ಅವ್ಯವಹಾರದ ಬಗ್ಗೆ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ದಸ್ತಗೀರ್ ಎಸ್.ಅಸಾದುಲ್ಲಾ ಎಚ್ಚರಿಸಿದರು.

ಮುಸ್ಲಿಂ ಸಮಾಜದ ಮುಖಂಡರಾದ ಮಲೆಬೆನ್ನೂರಿನ ಎಂ.ಬಿ.ಶೌಕತ್ ಅಲಿ, ಹೊನ್ನಾಳಿ ಲಿಯಾಖತ್ ಅಲಿ ಖಾನ್, ಮಹಮ್ಮದ ಫಾಸಿಲ್‌, ಗಫಾರ್ ಖಾನ್, ಅಬು ಸಾಲೇಹ, ನಿಸಾರ್ ಅಹ್ಮದ್ ಖಾನ್‌, ಎಂ.ಎ.ಅಕ್ಬರ್ ಇತರರು ಇದ್ದರು.