ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದಲಿತ ಮುಖಂಡ ಎಚ್.ಎಂ.ಶಿವಣ್ಣ ಆಗ್ರಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಬೈರಾಪುರ-ಆಲ್ದರ ಗ್ರಾಮದ ದಲಿತ ಮುಖಂಡ, ಸಾಮಾಜಿಕ ಹೋರಾಟಗಾರ ಚಿತ್ರಪ್ಪ ಯರಬಾಳ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ, ಅವರ ವೃದ್ಧ ತಂದೆ ಮೇಲೆ ಹಲ್ಲೆ ಮಾಡಿದ ಉಂಬಳೈಬೈಲು ವಲಯ ಅರಣ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ದಲಿತ ಮುಖಂಡ ಎಚ್.ಎಂ.ಶಿವಣ್ಣ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರಸಿಂಹರಾಜಪುರ ತಾಲೂಕಿನ ಆಲ್ದರ-ಬೈರಾಪುರ ಗ್ರಾಮದ ಸ.ನಂ 44 ರಲ್ಲಿ ಪ.ಜಾತಿಗೆ ಸೇರಿದ ಭೋವಿ ಜನಾಂಗದ 30 ಕುಟುಂಬದವರು ಕಳೆದ 50 ವರ್ಷದಿಂದ ಜಮೀನು ಕೃಷಿ ಮಾಡಿ ಕೊಂಡು ಬಂದಿದ್ದಾರೆ.1991 ರಲ್ಲಿ ಫಾರಂ ನಂ.50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದ್ದು 2017-18 ನೇ ಸಾಲಿನಲ್ಲಿ 30 ಕುಟುಂಬದವರಿಗೂ ತಲಾ 2 ಎಕರೆಯಿಂದ 3 ಎಕರೆವರೆಗೂ ಬಗರ್ ಹುಕಂ ಸಮಿತಿ ಜಮೀನು ಮಂಜೂರು ಮಾಡಿದೆ. ಚಿತ್ರಪ್ಪ ಯರಬಾಳ ಅವರ ತಂದೆ ಕೊಲ್ಲಪ್ಪ ಅವರಿಗೂ 2 ಎಕರೆ 25 ಗುಂಟೆ ಮಂಜೂರಾಗಿದೆ ಎಂದರು.2019 ರಲ್ಲಿ ಉಂಬಳೆಬೈಲು ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಭೂ ಕಬಳಕೆ ಕೇಸನ್ನು ನ್ಯಾಯಾಲಯಕ್ಕೆ ಹಾಕಲಾಗಿತ್ತು. 2022 ರಲ್ಲಿ ನ್ಯಾಯಾಲಯ ಈ ಜಮೀನು ನಗರ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಲ್ಲಾ ದಾವೆಗಳನ್ನು ಮುಕ್ತಾಯಗೊಳಿಸಿದೆ.
ಆದರೆ, ಅಕ್ಟೋಬರ್ 28 ರಂದು ಉಂಬಳೈಬೈಲು ವಲಯ ಅರಣ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಚಿತ್ರಪ್ಪ ಯರಬಾಳ ಅವರ ತಂದೆ ಕೊಲ್ಲಪ್ಪ ಅವರ ಸ್ವಂತ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲಿ ಕೃಷಿ ಹೊಂಡದಿಂದ ತೆಗೆದ ಮಣ್ಣಿನಿಂದ ಸ್ವಂತ ಬಳಕೆಗೆ ಎಂದು ಸುಟ್ಟಿದ್ದ ಇಟ್ಟಿಗೆ ಗೂಡನ್ನು ಕೆಡವಿಹಾಕಿ 2 ಟ್ರಾಕ್ಟರ್ ಇಟ್ಟಿಗೆಯನ್ನು ತುಂಬಿ ಕೊಂಡು ಉಳಿದ ಇಟ್ಟಿಗೆಯನ್ನು ಅಮಾನತ್ತು ಮಾಡಿದ್ದಾರೆ. ಈ ಸಂದರ್ಭದಲ್ಲಿ ತಡೆಯಲು ಹೋದ 80 ವರ್ಷದ ವೃದ್ಧ ಕೊಲ್ಲಪ್ಪ ಅವರ ಮೇಲೆ ದೈಹಿಕ ದೌರ್ಜನ್ಯ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.ಅಂದೇ ದಲಿತ ಮುಖಂಡ ಚಿತ್ರಪ್ಪ ಯರಬಾಳ ಮೇಲೆ ಉಂಬಳೈಬೈಲು ಅರಣ್ಯಾಧಿಕಾರಿ ಅರಣ್ಯ ಒತ್ತುವರಿ ಹಾಗೂ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ ಎಂದು ಸುಳ್ಳು ಕೇಸು ದಾಖಲಿಸಿದ್ದಾರೆ. ಕೊಲ್ಲಪ್ಪ ಅವರನ್ನು ಅಂದೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈವರೆಗೂ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದರು.
ಶಿವಮೊಗ್ಗದ ವಕೀಲ ಷಡಕ್ಷರಪ್ಪ ಮಾತನಾಡಿ, ಈಗಾಗಲೇ ದಲಿತರ ಮೇಲೆ ಅರಣ್ಯಾಧಿಕಾರಿ ಹಲ್ಲೆ ಮಾಡಿದ ತಕ್ಷಣ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ನರಸಿಂಹರಾಜಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು. ಆದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. 2 ದಿನ ಕಾಯುತ್ತೇವೆ. ಅರಣ್ಯಾಧಿಕಾರಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಚಳುವಳಿ ನಡೆಸುತ್ತೇವೆ ಹಾಗೂ ನ್ಯಾಯಾಲಯಕ್ಕೂ ಹೋಗುತ್ತೇವೆ ಎಂದರು.ಸರ್ಕಾರ ತಕ್ಷಣ ಭದ್ರಾವತಿ ವಿಭಾಗದ ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ರತ್ನಪ್ರಭ ಹಾಗೂ ಉಂಬಳೆಬೈಲು ಆರ್.ಎಫ್.ಓ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಮಾನತ್ತಿನಲ್ಲಿ ಇಡಬೇಕು. ನರಸಿಂಹರಾಜಪುರ ಪೊಲೀಸ್ ಠಾಣಾಧಿಕಾರಿ ತಕ್ಷಣ ಅರಣ್ಯಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸಂಬಂಧಪಟ್ಟ ದಾಖಲೆ ಪ್ರದರ್ಶಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಚಿತ್ರಪ್ಪ ಯರಬಾಳ, ಜಿಲ್ಲಾ ಎಸ್.ಸಿ, ಎಸ್.ಟಿ. ದೌರ್ಜನ್ಯ ಜಾಗೃತಿ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್ ಉಪಸ್ಥಿತರಿದ್ದರು.