ಅನಧಿಕೃತ ಕೋಚಿಂಗ್ ಸೆಂಟರ್‌ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Jul 19 2024, 12:53 AM IST

ಸಾರಾಂಶ

ಶಹಾಪುರದಲ್ಲಿ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಸಂಘ ಹಾಗೂ ತಾಲೂಕು ಖಾಸಗಿ ಶಾಲಾ ಒಕ್ಕೂಟದಿಂದ ಸಚಿವ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನಲ್ಲಿ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವ ಕೋಚಿಂಗ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಆರ್. ಚನ್ನಬಸ್ಸು ವನದುರ್ಗ ನೇತೃತ್ವದಲ್ಲಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಸಂಘ ಹಾಗೂ ತಾಲೂಕು ಖಾಸಗಿ ಶಾಲಾ ಒಕ್ಕೂಟದಿಂದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಹಲವು ಕೋಚಿಂಗ್ ಸೆಂಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದೆ ರಾಜಾರೋಷವಾಗಿ ನಾಯಿ ಕೊಡೆಯಂತೆ ತಲೆ ಎತ್ತಿವೆ. ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು 1995ರ ನಂತರ ಸುಮಾರು 28 ವರ್ಷಗಳಿಂದಲೂ ಸರಕಾರದಿಂದ ಯಾವುದೇ ಅನುದಾನ ಪಡೆಯದೆ, ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧನೆಯನ್ನು ಮಾಡುತ್ತಾ ಬಂದಿದ್ದು, ಪ್ರಸ್ತುತ ಸಮಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಅನೇಕ ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿಯಿಂದ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳಿಂದ ಇಂದು ನಲುಗಿವೆ. ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಪಾಠ ಬೋಧನೆಯನ್ನು ಮಾಡುವ ಶಿಕ್ಷಕರ ಉಳಿವಿಗಾಗಿ ಕೂಡಲೇ ಎಚ್ಚೆತ್ತುಕೊಂಡು ಸರ್ಕಾರ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ನೀಡಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಸದಸ್ಯರು ಒತ್ತಾಯಿಸಿದರು.

ನಗರದಲ್ಲಿ ಸರ್ಕಾರದಿಂದ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಯಾವುದೇ ಅಧಿಕಾರಿಗಳ ಸೂಚನೆಗೆ ಮಣಿಯದೇ ಅನಧಿಕೃತವಾಗಿ ಕೋಚಿಂಗ್ ಶಾಲೆಗಳನ್ನು ನಡೆಸುತ್ತಿದ್ದು, ತಕ್ಷಣವೇ ಅಂತಹ ಶಾಲೆಗಳ ವಿರುದ್ಧ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಸಚಿವರಿಗೆ ಆಗ್ರಹಿಸಿದರು.

ಮನವಿಗೆ ಸ್ಪಂದಿಸಿ, ಮಾತನಾಡಿದ ಸಚಿವ ಶರಣಗೌಡ ದರ್ಶನಾಪುರ ಅವರು, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಸ್ಥಗಿತಗೊಳಿಸಿಬೇಕು ಎಂದರು.

ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪರಿಶೀಲಿಸಿ, ಮಕ್ಕಳಿಲ್ಲದೆ ಹಾಜರಾತಿ ನೀಡಿ ಸರ್ಕಾರಕ್ಕೆ ವಂಚಿಸುತ್ತಿರುವ ಮುಖ್ಯ ಶಿಕ್ಷಕರು ಮತ್ತು ಅದಕ್ಕೆ ಸಹಕರಿಸುತ್ತಿರುವವರು ಯಾರೆ ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಅವರು, ಶಾಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಯಾರು ಕೂಡ ಅನಧಿಕೃತ ಶಾಲೆಗಳನ್ನು ನಡೆಸಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಸಂಘದ ಸಂಚಾಲಕ ಮಲ್ಲಿಕಾರ್ಜುನ ಪಾಟೀಲ್, ಖಾಸಗಿ ಶಾಲಾ ಒಕ್ಕೂಟದ ಗೌರವಾಧ್ಯಕ್ಷ ಶರಣಗೌಡ ಪಾಟೀಲ್, ಕಾರ್ಯದರ್ಶಿ ವಿ.ಸತ್ಯಂರೆಡ್ಡಿ, ಕನ್ನಡ ಮಾಧ್ಯಮ ಶಾಲೆಗಳ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ, ಸಹ ಕಾರ್ಯದರ್ಶಿ ತಿಪ್ಪಣ್ಣ ಖ್ಯಾತನಾಳ, ಉಪಾಧ್ಯಕ್ಷ ವೈ.ಎಂ.ಪಾಟೀಲ್, ಪ್ರವೀಣ ಫಿರಂಗಿ, ರಾಮುಸಗರ, ಶರಣಗೌಡ ಗೋಗಿ, ಮೃತ್ಯುಂಜಯ, ಸಂಗನಬಸಪ್ಪ ದೊರಿ, ಚೆನ್ನಯ್ಯಸ್ವಾಮಿ, ಶಿವಶಂಕರ ಹೇರೂಂಡಿ, ಅಶೋಕ ಘನಾತೆ, ಮೂರ್ತಿ ಮುದ್ಗಲ, ಶರಣಪ್ಪ ಜಂಗಂಡಿ, ಅರವಿಂದ ಕುಲಕರ್ಣಿ, ಪ್ರದೀಪ ಪುರ್ಲೆ, ಚಂದ್ರು ಹೊಸ್ಮನಿ ಇತರರಿದ್ದರು.