ಖಾಸಗಿ ಫೈನಾನ್ಸ್‌ಗಳಿಂದ ಕಿರುಕುಳ ನಿಲ್ಲಿಸಲು ಆಗ್ರಹ

| Published : Jun 11 2024, 01:35 AM IST

ಸಾರಾಂಶ

ಖಾಸಗಿ ಫೈನಾನ್ಸ್‌ಗಳಿಂದ ಆಗುತ್ತಿರುವ ಕಿರುಕುಳ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಸೋಮವಾರ ತಹಸೀಲ್ದಾರ್‌ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಖಾಸಗಿ ಫೈನಾನ್ಸ್‌ಗಳಿಂದ ಆಗುತ್ತಿರುವ ಕಿರುಕುಳ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಸೋಮವಾರ ತಹಸೀಲ್ದಾರ್‌ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕಿನಾದ್ಯಂತ ಇತ್ತೀಚಿಗೆ ಹುಟ್ಟಿಕೊಂಡಿರುವ ಕೆಲವು ಖಾಸಗಿ ಫೈನಾನ್ಸ್‌ಗಳು ಜನರಿಗೆ ಸಾಲ ಕೊಟ್ಟು ಅವರಿಂದ ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ. ಹಣ ಪಾವತಿಸದಿದ್ದರೆ ಮನೆಯ ಮುಂದೆ ಬಂದು ಮನೆಗೆ ಬೀಗ ಹಾಕುತ್ತೇವೆ, ಹರಾಜು ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಇದೀಗ ಮುಂಗಾರು ಮಳೆಯಿಂದ ಚೇತರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಕೆಲಸಗಳು ಪ್ರಾರಂಭವಾಗಿದ್ದು ಸಾಲ ಪಾವತಿಸುತ್ತೇವೆ ಸಮಯ ಕೊಡಿ ಎಂದರೂ ಕೇಳುತ್ತಿಲ್ಲ. ಹಳ್ಳಿಯ ಮುಗ್ಧ ಹೆಣ್ಣುಮಕ್ಕಳ ಆಧಾರ ಕಾರ್ಡ್‌ನ್ನು ಬಳಕೆ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆಯಲ್ಲಿರುವ ಗಂಡಂದಿರಿಗೂ ಕೂಡ ವಿಷಯ ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಮ್ಮ ಆಧಾರ ಕಾರ್ಡ್‌ನ್ನು ಯಾರೇ ಕೇಳಿದರೂ ಕೊಡದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಯಾರಿಗೂ ಕೂಡ ಖಾಸಗಿ ಫೈನಾನ್ಸ್‌ಗಳಲ್ಲಿ ಹಣ ಕೊಡಿಸಲಿಕ್ಕೆ ಮುಂದಾಗಬಾರದು ಎಂದು ಹಳ್ಳಿಯ ಹೆಣ್ಣುಮಕ್ಕಳು ಎಚ್ಚೆತ್ತುಕೊಳ್ಳವಂತಹ ಒಂದು ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕು. ಜನರಿಗೆ ಕಿರುಕುಳ ನೀಡುತ್ತಿರುವ ಇಂತಹ ಖಾಸಗಿ ಫೈನಾನ್ಸ್‌ಗಳ ವ್ಯಕ್ತಿಗಳನ್ನು ಕರೆಯಿಸಿ ಅವರ ನಿಯಮಾವಳಿಗಳ ಪ್ರಕಾರ ವಸೂಲಿ ಮಾಡಬೇಕು. ಸಾಲ ಮರು ಪಾವತಿಸಲು ಕಾಲಾವಕಾಶಗಳನ್ನು ಕೊಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಹನುಮಂತಪ್ಪ ಕಬ್ಬಾರ, ಹಸಿನಬಾನು, ಸೋಮವ್ವ, ರೇಣುಕಾ, ರತ್ನಮ್ಮ, ಗೀತಾ, ನಿಂಗವ್ವ, ರತ್ನಾ, ಸುನಂದ, ಶೋಭಾ, ಪ್ಯಾರಿಜಾನ ಮತ್ತಿತರರಿದ್ದರು.