ಪ್ರತಿ ಟನ್‌ ಕಬ್ಬಿಗೆ 4 ಸಾವಿರ ರು. ಘೋಷಿಸಿ, ರಾಜ್ಯ ಸರ್ಕಾರ 500ರು. ಪ್ರೋತ್ಸಾಹ ಧನ ಕೊಡಲಿ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಪ್ರತಿ ಟನ್‌ ಕಬ್ಬಿಗೆ 4 ಸಾವಿರ ರು. ಘೋಷಿಸಿ, ರಾಜ್ಯ ಸರ್ಕಾರ 500ರು. ಪ್ರೋತ್ಸಾಹ ಧನ ಕೊಡಲಿ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಆಗ್ರಹಿಸಿದರು.

ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಸಂಪೂರ್ಣ ಬರಗಾಲ ಇದ್ದು ತಮಿಳನಾಡು 700ರು.ಮಹಾರಾಷ್ಟ್ರ ಸರ್ಕಾರ 420ರು. ಪ್ರೋತ್ಸಾಹ ಧನ ಘೋಷಿಸಿದೆ ಅದರಂತೆ ರಾಜ್ಯ ಸರ್ಕಾರವು ರೈತರ ಪ್ರತಿ ಟನ್‌ ಕಬ್ಬಿಗೆ 500ರು. ಪ್ರೋತ್ಸಾಹಧನ ಘೋಷಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬೆಳಗಾವಿ, ಬಿಜಾಪೂರ, ಬೀದರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಉತ್ಪಾದಿಸಲಾಗುತ್ತದೆ. ಸಧ್ಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಉತ್ತಮವಾಗಿದ್ದು ಅದಕ್ಕೆ ತಕ್ಕಂತೆ ಪ್ರತಿ ಟನ್‌ ಕಬ್ಬಿಗೆ 4 ಸಾವಿರ ರು. ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ನ.12ರಂದು ಹಮ್ಮಿಕೊಂಡಿದ್ದ ಹೋರಾಟಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣವಾಗಿ ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.

ಕಳೆದ ವರ್ಷ ಪ್ರತಿ ಟನ್‌ಗೆ 2900ರು.ನೀಡಲಾಗಿದ್ದು ಆಗ ಸಕ್ಕರೆ ಬೆಲೆ ಕೂಡ 29ರು. ಕೆಜಿ ಇತ್ತು ಈಗ ಕೆಜಿಗೆ ಸರಾಸರಿ 50 ರು. ಇದೆ ಹೀಗಾಗಿ ಕಬ್ಬಿಗೆ 4 ಸಾವಿರ ರು. ಕೊಡಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೆ ಸಕ್ಕರೆ ಕಾರ್ಖಾನೆಗಳ ಮಾಲೀಕರ, ರೈತರ ಸಭೆ ನಡೆಸಿ ಅಂತಿಮ ತಿರ್ಮಾನ ಕೈಗೊಳ್ಳಬೇಕೆಂದು ಬಂಡೆಪ್ಪ ಖಾಶೆಂಪೂರ ಮನವಿ ಮಾಡಿದರು.

ಸಕ್ಕರೆ ಕಾರ್ಖಾನೆಗಳಲ್ಲಿರುವ ತೂಕದ ಯಂತ್ರದ ಬಗ್ಗೆ ರೈತರಲ್ಲಿ ಗೊಂದಲ ಇದೆ ಹೀಗಾಗಿ ಖುದ್ದು ಜಿಲ್ಲಾಧಿಕಾರಿಗಳೇ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಇಲ್ಲವೆ ಆಹಾರ ಇಲಾಖೆಯ ಉನ್ನತ ಅಧಿಕಾರಿಗಳಿಂದ ಪರಿಶೀಲಿಸಿ ರೈತರಲ್ಲಿರುವ ಗೊಂದಲ ನಿವಾರಣೆ ಮಾಡಬೇಕು ಎಂದರು.

ದೀಪಾವಳಿ ಸಿಎಂ ಗಿಫ್ಟ್‌ ಪಟಾಕಿ ಠುಸ್‌, ಹಬ್ಬ ಮುಗಿದ್ರೂ ನಯಾ ಪೈಸೆ ಪರಿಹಾರ ಬಂದಿಲ್ಲ: ರೈತರಿಗೆ ದೀಪಾವಳಿ ₹5 ಸಾವಿರ ಗಿಫ್ಟ್‌ ಎಂದು ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಸಚಿವರು ಬಿಂಬಿಸಿದ್ದರು ಆದರೆ ದೀಪಾವಳಿಯೇ ಮುಗಿದು ಹೋಯಿತು ಇಲ್ಲಿಯವರೆಗೆ ರೈತರ ಖಾತೆಗೆ ನಯಾ ಪೈಸೆ ಬಂದಿಲ್ಲ ಇಲ್ಲ. ರೈತರಿಗೆ ನೀಡಲು ಸರ್ಕಾರ ಏಕೆ ಲೆಕ್ಕ ಹಾಕುತ್ತಿದೆ ಎಂದು ಪ್ರಶ್ನಿಸಿದರು.

ನೀವು ಘೋಷಿಸಿದ್ದ ಪರಿಹಾರ ಮೊದಲು ನಿಮ್ಮ ಖಜಾನೆಯಿಂದ ನೀಡಿ ನಂತರ ಕೇಂದ್ರದ ಪರಿಹಾರ ಹೇಗಾದರೂ ಬಂದೇ ಬರುತ್ತದೆ. ಸುಮ್ಮನೆ ಕೇಂದ್ರದ ನೆಪ ಹೇಳಬೇಡಿ ಎಂದ ಅವರುಹಾಲಿನ ದರ ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕರಿಂದ 8ರು. ಹೆಚ್ಚಿಗೆ ಪಡೆದು 7 ರು. ರೈತರಿಗೆ ನೀಡಿ 1ರು. ಯುನಿಯನ್‌ಗೆ ನೀಡುತ್ತಿ ದ್ದೀರಿ ಸರ್ಕಾರ ಏನಾದರೂ ಪ್ರೋತ್ಸಾಹ ಧನ ಕೊಡುವ ಮೂಲಕ ಸಾರ್ವಜನಿಕರ ಮೇಲಿನ ಹೊರೆ ಕಡಿಮೆ ಮಾಡಬಹುದಿತ್ತು ಎಂದರು.

ಬಸ್‌ ದರದಲ್ಲಿ ಸರ್ಕಾರದ ಆತಂಕಕಾರಿ ಏರಿಕೆ: ರಾಜ್ಯದ ಇತಿಹಾಸದಲ್ಲಿಯೇ ಶೇ.35ರಿದ 40ರಷ್ಟು ಬಸ್‌ ದರ ಏರಿಕೆಯಾಗಿದ್ದು ಪ್ರಥಮ ಬಾರಿಗೆ ಎಂದ ಅವರು ಬೀದರ್‌ನಿಂದ ಬೆಂಗಳೂರಿಗೆ ರೆಡ್‌ ಬಸ್‌ ದರ ಈ ಹಿಂದೆ 940ರು. ಇತ್ತು ಈಗ 1145 ರು. ಆಗಿದೆ ಹೀಗೆ 196 ರು. ಹೆಚ್ಚಳ ಆಗಿದೆ. ದರ ಹೆಚ್ಚಳಕ್ಕೆ ಡೀಸಲ್‌ ಬೆಲೆ ಏರಿಕೆ ಎಂದು ಹೇಳುತಿದ್ದೀರಿ ಕಳೆದ 3 ವರ್ಷದಲ್ಲಿ 89 ರು. ಇದ್ದದ್ದು 99.7ರು. ಆಗಿದೆ. ಯಾವ ಲೆಕ್ಕದ ಆಧಾರದ ಮೇಲೆ ದರ ಹೆಚ್ಚಳ ಮಾಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ, ಮುಖಂಡರಾದ ಶಾಂತಲಿಂಗ ಸಾವಳಗಿ, ರಾಜು ಕಡ್ಯಾಳ, ಅಶೋಕ ಕೊಡಗೆ, ಅಭಿ ಕಾಳೆ, ರಾಜಶೇಖರ ಜವಳೆ ಸೇರಿದಂತೆ ಇನ್ನಿತರರು ಇದ್ದರು.