ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ಪರಿಹಾರಕ್ಕೆ ಆಗ್ರಹ

| Published : Jan 01 2025, 12:00 AM IST

ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ಪರಿಹಾರಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ರು. ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಲು ಆದೇಶಿಸಬೇಕು. ಸೆಸ್‌ ವಸೂಲಿ ಪ್ರಾಧಿಕಾರ ರಚನೆ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಎಲ್ಲ ಕಾಮಗಾರಿಗಳ ಮೌಲ್ಯಮಾಪನ ಮಾಡಲು ತಕ್ಷಣ ಅಧಿಕಾರಿಗಳ ನೇಮಕ ಮಾಡಿ ಶೇ.2ರಂತೆ ಬಡ್ಡಿ ಸಹಿತ ಸೆಸ್ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ವೈ ಕುಮಾರ್ ಮಾತನಾಡಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ಹಿಂದಿನ ರಾಜ್ಯ ಸರ್ಕಾರಗಳು ಹರಸಾಹಸಪಟ್ಟು ಮಂಡಳಿ ರಚನೆ ಮಾಡಿದ್ದು ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ನೊಂದಾಯಿತ ಕಟ್ಟಡ ಕಾರ್ಮಿಕರ ಭದ್ರತೆ ಮತ್ತು ಏಳಿಗೆಗಾಗಿ ಶ್ರಮಿಸುವಂತಹ ಕೆಲಸ ಆಗುತ್ತಿಲ್ಲ. ಬಿಜೆಪಿ ಮತ್ತು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಕಾರ್ಮಿಕರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ ಎಂದು ದೂರಿದರು.

ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ಬೇಕಾಬಿಟ್ಟಿ ಮಾನದಂಡಗಳನ್ನು ವಿಧಿಸಿದ್ದು, ಅವುಗಳ ಸರಳೀಕರಣಗೊಳಿಸಿ 3 ವರ್ಷಗಳಿಗೊಮ್ಮೆ ನವೀಕರಣ ಮಾಡುವಂತೆ ಆದೇಶಿಸಬೇಕು. ಕಟ್ಟಡ ಕಾರ್ಮಿಕರ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರು. ನೀಡಬೇಕು. ಮಾಸಿಕ ಪಿಂಚಣಿಯ 5 ಸಾವಿರ ರು. ಗಳಿಗೆ ಹೆಚ್ಚಿಸಬೇಕು. ಹೆರಿಗೆ ಭತ್ಯೆ ನಗದು ನೇರ ವರ್ಗಾವಣೆ 50 ಸಾವಿರ ರು, ಮದುವೆಗೆ 1 ಲಕ್ಷ ನೀಡಬೇಕು. ರಕ್ತ ತಪಾಸಣೆಯಲ್ಲಿ ಕಂಡು ಬಂದ ಖಾಯಿಲೆಗೆ ಆರೋಗ್ಯ ಭಾಗ್ಯ ಯೋಜನೆಜಾರಿ ಮಾಡಿ, ವೈದ್ಯಕೀಯ ಸೌಲಭ್ಯ ಕಲ್ಬಿಸಬೇಕೆಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್.ಜೆ, ರಾಜ್ಯ ಉಪಾಧ್ಯಕ್ಷ ಕೆ.ಗೌಸ್‌ಪೀರ್, ರಾಜ್ಯ ಖಜಾಂಚಿ ಈಶ್ವರಪ್ಪ.ಡಿ, ಉಪ ಖಜಾಂಚಿ ಚಾಂದ್‌ಪೀರ್, ನಿರ್ದೇಶಕ ಇಬಾದುಲ್ಲಾ, ರಾಜಪ್ಪ, ರಾಜಣ್ಣ ಮುಜೀಬ್‌ವುಲ್ಲಾ, ಮಾಯಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಬಸವರಾಜ್, ರಾಜ್ಯ ಉಪಾಧ್ಯಕ್ಷ ನಾದಿ ಅಲಿ, ರಾಜ್ಯ ನಿರ್ದೇಶಕ ಸಲಿಂ,ರಾಜ್ಯ ಸಹ ಕಾರ್ಯದರ್ಶಿ ಇಮಾಮ್ ಮಹೀ ಮುದ್ದೀನ್, ಗೌರವಾಧ್ಯಕ್ಷ ಮಹಂತೇಶಣ್ಣ, ಗೌಸ್ ಖಾನ್, ಪ್ರಸನ್ನ, ತಿಮ್ಮಯ್ಯ, ಫೈರೋಜ್, ರಾಘವೇಂದ್ರ , ಸಮೃದ್ದಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್.ಎಲ್, ಪ್ರಧಾನ ಕಾರ್ಯದರ್ಶಿ ಉಮೇಶ್.ಎನ್, ಚಿತ್ರದುರ್ಗ ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಪ್ಪ.ಟಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.