ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರದ ಸಮಗ್ರ ಅಭಿವೃದ್ದಿಗೆ ಒಟ್ಟು ₹772.70 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ (ಶಶಿ) ನೇತೃತ್ವದ ನಿಯೋಗ ಬುಧವಾರ ಸಂಜೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ನಗರಸಭಾ ಸದಸ್ಯರು ಮತ್ತು ನಾಗರಿಕರನ್ನೊಳಗೊಂಡ ನಿಯೋಗದ ನೇತೃತ್ವ ವಹಿಸಿದ್ದ ಕೆ.ಶೇಷಾದ್ರಿರವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ನಗರದಲ್ಲಿ ಯುಜಿಡಿ, ಸೀರಹಳ್ಳಕ್ಕೆ ತಡೆಗೋಡೆ, ಅರ್ಕಾವತಿ ನದಿಗೆ ಅಡ್ಡಲಾಗಿ 4 ಸೇತುವೆಗಳು, ನಗರಕ್ಕೆ ಐದು ಪ್ರವೇಶದ್ವಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ರಾಮನಗರದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ಅನೇಕ ಬಾರಿ ಆಶಯ ವ್ಯಕ್ತಪಡಿಸಿದ್ದಾರೆ. ಎಲ್ಲರ ಆಸೆಯಂತೆ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಇದೊಂದು ಸುವರ್ಣ ಅವಕಾಶ ಸಿಕ್ಕಂತಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರವನ್ನು ವಿಶ್ವದ ಗಮನ ಸೆಳೆಯುವ ಉದ್ದೇಶ ಮುಖ್ಯಮಂತ್ರಿಗಳಿಗಿದೆ. ಇದರೊಟ್ಟಿಗೆ ನಮ್ಮನ್ನು (ನಗರಸಭೆ ವ್ಯಾಪ್ತಿ) ಸಹ ಜೊತೆಗೆ ಕರೆದೊಯ್ಯಬೇಕು. ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಬೇಕು ಎಂದು ಕೆ.ಶೇಷಾದ್ರಿರವರು ಮನವಿ ಮಾಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಚುನಾವಣಾ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ಭರವಸೆ ನೀಡಲಾಗಿತ್ತು. ರಾಮನಗರ ಟೌನ್ ಮಾತ್ರವಲ್ಲದೇ ಇಡೀ ಬೆಂಗಳೂರು ದಕ್ಷಿಣ ಜಿಲ್ಲೆಗೆ ವಿಶೇಷವಾದ ರೂಪ ಕೊಡಬೇಕು ಎಂಬುದು ನನ್ನ ಉದ್ದೇಶ. ಈಗ ಆಗದಿದ್ದರೆ, ಇನ್ನೆಂದಿಗೂ ಆಗುವುದಿಲ್ಲ ಎಂಬ ಅರಿವಿದೆ ಎಂದು ಹೇಳಿದರು.

-------

...ಬಾಕ್ಸ್ ....

ಬೇಡಿಕೆಗಳು ಏನೇನು ?

ಯುಜಿಡಿ ವ್ಯವಸ್ಥೆ ಕಲ್ಪಿಸಲು ₹300 ಕೋಟಿ, ನಗರಸಭೆಯ ಎಲ್ಲಾ 31 ವಾರ್ಡುಗಳಲ್ಲಿ ಬಡಾವಣೆಗಳ ಸಮಗ್ರ ಅಭಿವೃದ್ದಿಗೆ ₹190 ಕೋಟಿ , ಉದ್ಯಾನವನಗಳ ಅಭಿವೃದ್ದಿಗೆ ₹12.40 ಕೋಟಿ , ಅರ್ಕಾವತಿ ನದಿಗೆ ಅಡ್ಡಲಾಗಿ 4 ಸೇತುವೆಗಳ ನಿರ್ಮಾಣಕ್ಕೆ ₹25 ಕೋಟಿ , ಸೀರಹಳ್ಳಕ್ಕೆ ತಡೆಗೋಡಿ ನಿರ್ಮಿಸಲು ₹20 ಕೋಟಿ , ನೆಟ್ಕಲ್ ಯೋಜನೆಗೆ ಸಂಬಂಧಿಸಿದಂತೆ ಒಳಚರಂಡಿ ಮಂಡಳಿಯಲ್ಲಿ ಡಿಜಟಲೀಕರಣ ವ್ಯವಸ್ಥೆಗೆ ₹60 ಕೋಟಿ , ನಗರಕ್ಕೆ 5 ಪ್ರವೇಶದ್ವಾರಗಳನ್ನು ನಿರ್ಮಿಸಲು ₹2 ಕೋಟಿ, ಅರ್ಕಾವತಿ ನದಿ ದಂಡೆಯ ಮೇಲಿರುವ ಐಡಿಎಸ್ಎಂಟಿ (ಡಾ.ರಾಜ್ ಕುಮಾರ್) ಕಾಂಪ್ಲೆಕ್ಸ್ ನವೀಕರಣಕ್ಕೆ ₹5 ಕೋಟಿ , ಸ್ಮಶಾನಗಳ ಅಭಿವೃದ್ದಿಗೆ ₹5 ಕೋಟಿ , ನಗರಸಭೆ ಕಚೇರಿ ಪಕ್ಕ ವಾಣಿಜ್ಯ ಸಂಕಿರ್ಣ ನಿರ್ಮಿಸಲು ₹25 ಕೋಟಿ , ಅಂಬೇಡ್ಕರ್ ಭವನದ ನವೀಕರಣಕ್ಕೆ ₹5 ಕೋಟಿ , ಪಿಡಬ್ಲ್ಯೂಡಿ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗಿನ ರಸ್ತೆ ಅಭಿವೃದ್ದಿಗೆ ₹5 ಕೋಟಿ , ರೈಲು ನಿಲ್ದಾಣ ವೃತ್ತ, ಬಸ್ ನಿಲ್ದಾಣ ವೃತ್ತ, ಕೆಂಪೇಗೌಡ ವೃತ್ತಗಳ ಸೌಂದರ್ಯೀಕರಣಕ್ಕೆ ₹6 ಕೋಟಿ , ಬಕ್ಷಿ ಕೆರೆ ಮತ್ತು ಬೋಳಪ್ಪನಹಳ್ಳಿ ಅಮಾನಿಕೆರೆಗಳ ಅಭಿವೃದ್ದಿಗೆ ₹20 ಕೋಟಿ , ನಗರ ಪೊಲೀಸ್ ಠಾಣೆ ಎದುರಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹5 ಕೋಟಿ , ಯುಐಡಿಎಫ್ ಯೋಜನೆಯಡಿ ನಗರಸಭೆಯ ಪಾಲು ಶೇ 15 ತುಂಬಿಸಲು ₹12.30 ಕೋಟಿ ಸೇರಿದಂತೆ ಒಟ್ಟು ₹772.70 ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೆ.ಶೇಷಾದ್ರಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.