ಕನ್ನಡಪ್ರಭ ವಾರ್ತೆ ಸಾಗರ

ಮಲೆನಾಡಿನ ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಫೆಬ್ರವರಿ ಕೊನೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಮಾ.೨ರಂದು ಸಿಗಂದೂರು ಸೇತುವೆಯ ಮೇಲೆ ರಸ್ತೆತಡೆ ಚಳವಳಿ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮಧು ಬಂಗಾರಪ್ಪ ಪಾದಯಾತ್ರೆ ಮಾಡಿ ಶಿವಮೊಗ್ಗದಲ್ಲಿ ರ‍್ಯಾಲಿ ನಡೆಸಿದ್ದರು. ರ‍್ಯಾಲಿಯಲ್ಲಿ ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಕ್ಷಣವೇ ಮಲೆನಾಡಿನ ರೈತರ ಭೂ ಸಮಸ್ಯೆಗಳನ್ನು ಪರಿಹರಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಇನ್ನು ಮಲೆನಾಡಿನ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಲೆನಾಡಿನ ರೈತರ ಸಮಸ್ಯೆ ಅಧ್ಯಯನ ಸಮಿತಿ ರಚಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ವರದಿ ಕೊಡುವಂತೆ ಹೇಳಿದ್ದರು. ಈ ಸಮಿತಿಯಲ್ಲಿದ್ದ ನಾನು, ಬಿ.ಆರ್. ಜಯಂತ್, ರವೀಂದ್ರನಾಯಕ್ ಮತ್ತಿತರರು ಸಮಸ್ಯೆಗಳ ಬಗ್ಗೆ ಗಮನ ಸೆಳೆದದ್ದಲ್ಲದೆ ಪರಿಹಾರದ ಮಾರ್ಗೊಪಾಯದ ಬಗ್ಗೆ ವರದಿ ನೀಡಿದ್ದೆವು. ಆದರೆ ರೈತರ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ರಾಜ್ಯ ಸರ್ಕಾರ ಮಲೆನಾಡಿನ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ದ್ರೋಹ ಮಾಡಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು ಬಿಟ್ಟರೆ ನಂತರ ಯಾವ ಗಂಭೀರ ಕ್ರಮವನ್ನು ಕೈಗೊಂಡಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಕಾರ್ಯದರ್ಶಿ ಇಬ್ಬರೂ ಕುಳಿತು ಬಗೆಹರಿಸಿ ಎಂದು ಹೇಳಿ ೧ ವರ್ಷ ೨ ತಿಂಗಳು ಕಳೆದರೂ ಗಂಭೀರ ಕ್ರಮ ತೆಗೆದುಕೊಂಡಿಲ್ಲವೆಂದು ಆರೋಪಿಸಿದ ತೀ.ನ., ವಿದ್ಯುತ್ ಹಾಗೂ ನೀರಾವರಿ ಯೋಜನೆಗಳಿಗೆ ತಮ್ಮ ಜಮೀನು ಬಿಟ್ಟುಕೊಟ್ಟ ರೈತರ ಮೇಲೆ ರಾಜ್ಯ ಸರ್ಕಾರ ಕೇಸು ಹಾಕುತ್ತಿದೆ. ಹಕ್ಕುಪತ್ರ ಇದ್ದವರ ಮೇಲೆಯೂ ಕೇಸು ಹಾಕಲಾಗುತ್ತಿರುವುದು ಮಲೆನಾಡಿನ ರೈತರ ಬಗ್ಗೆ ರಾಜ್ಯ ಸರ್ಕಾರದ ಧೋರಣೆಯನ್ನು ತೋರಿಸುತ್ತದೆ ಎಂದರು.


ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನಗಳಾದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ನಡೆದ ದೊಡ್ಡ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆ ಭಾಗದ ರೈತರಿಗೆ ಹಕ್ಕುಪತ್ರ ನೀಡಿದ್ದಾರೆ. ಆದರೆ ಮಲೆನಾಡಿನ ರೈತರ ಹಕ್ಕುಪತ್ರ ಕಸಿಯಲಾಗುತ್ತಿದೆ. ಮಲೆನಾಡಿನ ರೈತರ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಸಂದರ್ಭ ಬಂದರೆ ಕಾನೂನುಭಂಗ ಚಳವಳಿಯನ್ನು ನಡೆಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಮಪ್ಪ ಬೇಸೂರು, ಮಾಜಿ ಸೈನಿಕ ಉದಯ್, ಚಕ್ರಪಾಣಿ, ಅಶೋಕ ಬೇಸೂರು, ಮಂಜಪ್ಪ, ಅಂಬಾರಗೊಡ್ಲು ಮೋಹನ, ಆನಂದ ಇದ್ದರು.