ರಸಗೊಬ್ಬರ ಖರೀದಿ ವೇಳೆ ರೈತರಿಗೆ ಅವಶ್ಯಕವಿಲ್ಲದ ಲಿಂಕ್ ಗೊಬ್ಬರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುತ್ತಿರುವ ಕೃಷಿ ಪರಿಕರ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇತ್ತೀಚೆಗೆ ಕಂಪ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು.
ಕಂಪ್ಲಿ: ರಸಗೊಬ್ಬರ ಖರೀದಿ ವೇಳೆ ರೈತರಿಗೆ ಅವಶ್ಯಕವಿಲ್ಲದ ಲಿಂಕ್ ಗೊಬ್ಬರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುತ್ತಿರುವ ಕೃಷಿ ಪರಿಕರ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇತ್ತೀಚೆಗೆ ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ನಗರ ಘಟಕದ ಅಧ್ಯಕ್ಷ ತಿಮ್ಮಪ್ಪ ನಾಯಕ ಮಾತನಾಡಿ, ಕೃಷಿ ಇಲಾಖೆಯ ಎಫ್‌ಐಡಿ ವ್ಯವಸ್ಥೆಯಡಿ ಪ್ರತಿ ಎಕರೆಗೆ ಪ್ರತಿ ತಿಂಗಳಿಗೆ ಒಂದು ಚೀಲ ಯೂರಿಯಾ ಗೊಬ್ಬರ ಮಾತ್ರ ನಿಗದಿಪಡಿಸಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಅಗತ್ಯವಿದ್ದರೂ ನಿಗದಿತ ಪ್ರಮಾಣದ ಮಿತಿಯಿಂದ ಕೃಷಿ ಚಟುವಟಿಕೆಗೆ ಅಡಚಣೆ ಉಂಟಾಗುತ್ತಿದೆ ಎಂದು ದೂರಿದರು.ಒಂದು ಚೀಲ ಯೂರಿಯಾ ಗೊಬ್ಬರ ಪಡೆಯಬೇಕಾದರೆ ಅದರೊಂದಿಗೆ ನಾಲ್ಕು ಚೀಲ ಕಾಂಪ್ಲೆಕ್ಸ್ ಗೊಬ್ಬರ ಅಥವಾ ಇತರ ಗುಳಿಗೆ ಗೊಬ್ಬರಗಳನ್ನು ಖರೀದಿಸುವಂತೆ ಕೆಲವು ಕೃಷಿ ಪರಿಕರ ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ಅಗತ್ಯವಿಲ್ಲದ ಗೊಬ್ಬರಗಳನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಅವರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಈಗಾಗಲೇ ಕೃಷಿ ವೆಚ್ಚಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಇಂತಹ ಕ್ರಮಗಳು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಹೇಳಿದರು.ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಧನ ದರಗಳನ್ನು ನಿಯಂತ್ರಿಸುವ ಮೂಲಕ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್‌ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಕೊಡುವುದನ್ನು ನಿಷೇಧಿಸಿರುವುದರಿಂದ ಕೃಷಿ ಕಾರ್ಯಗಳಿಗೆ ಬಳಸುವ ವಾಹನಗಳ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ತಿಳಿಸಿದರು.ವ್ಹೀಲ್ ಅಳವಡಿಸಿರುವ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕರಣಗಳನ್ನು ಇಂಧನ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ರಸ್ತೆಗಳಲ್ಲಿ ಸಂಚರಿಸಬೇಕಾಗುತ್ತದೆ. ಇದರಿಂದ ರಸ್ತೆಗಳಿಗೆ ಹಾನಿಯಾಗುವ ಜತೆಗೆ ರೈತರಿಗೆ ಅನಗತ್ಯ ಸಮಯ ಹಾಗೂ ವೆಚ್ಚ ಉಂಟಾಗುತ್ತಿದೆ. ಕೃಷಿ ಉದ್ದೇಶಗಳಿಗೆ ಬಳಸುವ ಕ್ಯಾನ್‌ಗಳಿಗೆ ಸೂಕ್ತ ದಾಖಲೆಗಳ ಆಧಾರದ ಮೇಲೆ ಇಂಧನ ತುಂಬಿಕೊಡುವಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳಾದ ಟಿ. ಗಂಗಣ್ಣ, ವಿ.ಟಿ. ನಾಗರಾಜ, ಗಫೂರಸಾಬ್, ಅಯ್ಯೋದಿ ವಿರೂಪಣ್ಣ, ಎಸ್. ಮಲ್ಲಯ್ಯ, ವಿರೂಪಣ್ಣ, ನಾಗಪ್ಪ, ಬಿ.ಕೆ. ವೀರೇಶ್, ಸಿದ್ದಿ ಅಂಜಿನಪ್ಪ, ಬಿ. ನಾಗರಾಜ, ಸಿದ್ಧಾಪುರ ಬಸವರಾಜ ಇದ್ದರು.