ಪ್ರಯಾಣಿಕರಿಂದ ಅಧಿಕ ಹಣ ವಸೂಲಿ ಕ್ರಮಕ್ಕೆ ಆಗ್ರಹ

| Published : Oct 19 2025, 01:02 AM IST

ಸಾರಾಂಶ

ಇಲ್ಲಿನ ತದಡಿಯಿಂದ ಅಘನಾಶಿನಿಗೆ ಸಂಚರಿಸುವ ಬಾರ್ಜನಲ್ಲಿ ನಿಗದಿ ದರಕ್ಕಿಂತ ಹೆಚ್ಚು ಹಣವನ್ನ ಪ್ರಯಾಣಿಕರಿಂದ ಪಡೆಯುತ್ತಿದ್ದು, ಹಲವು ವರ್ಷಗಳಿಂದ ನಡೆಯುತ್ತಿರುವ ಈ ಸುಲಿಗೆ ತಪ್ಪಿಸಿ ನಿಗದಿತ ದರ ಹಾಗೂ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಗದಿತ ದರ, ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಿ, ಹಗಲು ದರೋಡೆ ನಿಲ್ಲಿಸಿ

ಕನ್ನಡಪ್ರಭ ವಾರ್ತೆ ಗೋಕರ್ಣ

ಇಲ್ಲಿನ ತದಡಿಯಿಂದ ಅಘನಾಶಿನಿಗೆ ಸಂಚರಿಸುವ ಬಾರ್ಜನಲ್ಲಿ ನಿಗದಿ ದರಕ್ಕಿಂತ ಹೆಚ್ಚು ಹಣವನ್ನ ಪ್ರಯಾಣಿಕರಿಂದ ಪಡೆಯುತ್ತಿದ್ದು, ಹಲವು ವರ್ಷಗಳಿಂದ ನಡೆಯುತ್ತಿರುವ ಈ ಸುಲಿಗೆ ತಪ್ಪಿಸಿ ನಿಗದಿತ ದರ ಹಾಗೂ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯವರು ಟೆಂಡರ್‌ ಮೂಲಕ ಖಾಸಗಿಯವರಿಗೆ ಇಲಾಖೆಯ ಬಾರ್ಜನ್ನ ಪ್ರಯಾಣಿಕರ ಕರೆದುಕೊಂಡು ಹೋಗಲು ನೀಡಲಾಗಿದೆ. ಪ್ರಯಾಣಿಕರಿಗೆ, ದ್ವಿಚಕ್ರ ವಾಹನಕ್ಕೆ ಇಲಾಖೆ ನಿಗದಿತ ದರ ಪಟ್ಟಿ ಮಾಡಿದೆ. ಆದರೆ ಇದರ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಹಗಲು ದರೋಡೆ ಮಾಡುತ್ತಿದ್ದಾರೆ.

ಸ್ಥಳೀಯರಿಗೊಂದು, ಪ್ರವಾಸಿಗರಿಗೊಂದು ದರ:ಬೈಕ್‌ಗೆ ₹೧೦, ಜನರಿಗೆ ₹ ೫ ನಿಗದಿ ಮಾಡಲಾಗಿದೆ. ಆದರೆ ಪ್ರಸ್ತುತ ಬೈಕ್‌ಗೆ ₹೨೦, ಜನರಿಗೆ ₹೧೦ ಪಡೆಯಲಾಗುತ್ತಿದೆ. ಬಾಡ ಮತ್ತಿತರ ಕಡೆಯಿಂದ ಗೋಕರ್ಣಕ್ಕೆ ಬರುವ ಪ್ರವಾಸಿಗರು ಈ ಮಾರ್ಗ ಅವಲಂಬಿಸಿದ್ದಾರೆ. ಕನ್ನಡ ಮಾತನಾಡುವ ಪ್ರವಾಸಿಗರಿಗೆ ಬೈಕ್‌ಗೆ ₹೪೦ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯರಿಗೆ ₹೩೦ ಪಡೆಯುತ್ತಾರೆ. ಅದೇ ಹಿಂದಿ ಮಾತನಾಡುವ ಪ್ರವಾಸಿಗರಾದರೆ ಬೈಕ್‌ಗೆ ₹೫೦-೪೦ ರವರೆಗೂ ವಸೂಲಿ ನಡೆಯುತ್ತಿದೆ ಎನ್ನಲಾಗಿದ್ದು, ವಾರಾಂತ್ಯದ ರಜೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಬರುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಸುಲಿಗೆ ನಡೆದಿದೆ ಎಂದು ಜನರು ದೂರುತ್ತಿದ್ದಾರೆ. ದೀಪಾವಳಿ ರಜೆ ಮತ್ತಷ್ಟು ಜನರು ಆಗಮಿಸುತ್ತಿದ್ದು, ಇದರೊಳಗೆ ಸುಲಿಗೆಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ದರ ಪಟ್ಟಿಯೂ ಇಲ್ಲ, ಟಿಕೆಟ್ ನೀಡುವುದಿಲ್ಲ:

ತದಡಿ ಮತ್ತು ಅಘನಾಶಿನಿ ಭಾಗದಲ್ಲಿ ಬಾರ್ಜ ಹತ್ತುವ ಪ್ರದೇಶದಲ್ಲಿ ನಿಗದಿ ದರ ಪಟ್ಟಿ ಅಳವಡಿಸಬೇಕು. ಆದರೆ ಇದುವರೆಗೂ ಪ್ರಯಾಣದ ದರ ಪಟ್ಟಿ ಅಳವಡಿಸದೆ ಬಿಡಲಾಗಿದ್ದು, ಇದರಿಂದ ಹೊರಗಿನವರು ಬಾರ್ಜನವರು ಹೇಳಿದಷ್ಟು ಹಣವನ್ನ ನೀಡಿ ತೆರಳುತ್ತಿದ್ದಾರೆ. ಇನ್ನೂ ಪ್ರಯಾಣಿಕರಿಗೆ ಹಣ ನೀಡಿದ್ದಕ್ಕೆ ಟಿಕೆಟ್‌ಸಹ ನೀಡದೆ ಹಾಗೆ ಹಣ ಪಡೆದು ಕಳುಹಿಸುತ್ತಿದ್ದಾರೆ. ಈ ಬಗ್ಗೆ ಸಹ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ.