ಕನ್ನಡಪ್ರಭ ವಾರ್ತೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು ನೀಡಿರುವ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ನಡೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣಗಳ ಜಿಲ್ಲಾ ಘಟಕದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು ನೀಡಿರುವ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ನಡೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣಗಳ ಜಿಲ್ಲಾ ಘಟಕದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.

ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಧೈರ್ಯಶೀಲ ಮಾನೆ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು, ಭಾವಚಿತ್ರ ಹರಿದು, ಸುಟ್ಟು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ, ಸಂಸದ ಜಗದೀಶ್ ಶೆಟ್ಟರ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ರವಾನಿಸಲಾಯಿತು.

ಬೆಳಗಾವಿ ಜಿಲ್ಲಾಧಿಕಾರಿಗಳ ಬಗ್ಗೆ ತಪ್ಪು ಮಾಹಿತಿ ಮತ್ತು ಕಾನೂನು ಬಾಹಿರವಾಗಿ ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಿರುವ ಧೈರ್ಯಶೀಲ ಮಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಸರ್ಕಾರ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ಸಂಸದ ಮಾನೆ ಅವರು, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದನ್ನು ಬಿಟ್ಟು, ಪಕ್ಕದ ರಾಜ್ಯದಲ್ಲಿ ಭಾಷಾ ಸಂಘರ್ಷ ಬೆಳೆಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಕಾನೂನು ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಅವರ ವಿರುದ್ಧವೇ ಹಕ್ಕು ಚ್ಯುತಿ ಮಂಡಿಸಬೇಕು. ಅಲ್ಲದೇ, ಕರ್ನಾಟಕದ ಸಂಸದವರೆಲ್ಲರೂ ಮಾನೆ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ, ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಬೇಕು ಎಂದು ಒತ್ತಾಯಿಸಿದರು.

ಕರವೇ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹೀರೆಕುಡಿ ಮಾತನಾಡಿ, ಮಾನೆ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಬಗ್ಗೆ ಸ್ಪೀಕರ್ ಬಳಿ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ. ಹೀಗಾಗಿ, ನಾವು ಜಿಲ್ಲಾಧಿಕಾರಿಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿರುವ ಸಂಸದ ಮಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇಯ ಮುಖಂಡರಾದ ಸುರೇಶ ಗವನ್ನವರ, ಮಹಾದೇವ ತಳವಾರ, ಗಣೇಶ ರೋಕಡೆ, ರಾಜು ನಾಶಿಪುಡಿ, ಹೊಳೆಪ್ಪ ಸುಳದಾಳ, ಅಡಿವೆಪ್ಪ ತಾಲ್ಲೂರಿ, ಬಸವರಾಜ ಅವರೊಳ್ಳಿ, ಪ್ರಕಾಶ ಲಮಾಣಿ, ಸತೀಶ್ ಗುಡದವರ ಸೇರಿ ಕರವೇ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

--------

ಬಾಕ್ಸ

ಎಂಇಎಸ್‌ನಿಂದ ಪ್ರಚೋದನೆ ಕೆಲಸ

ಮಹಾರಾಷ್ಟ್ರ ಏಕೀಕರಣ ಸಮಿತಿಯು ಕನ್ನಡ ರಾಜ್ಯೋತ್ಸವ ದಿನದಂದು ಗಡಿ ಭಾಗದಲ್ಲಿ ಕಪ್ಪುದಿನ ಆಚರಿಸುವ ಮೂಲಕ ಬೆಳಗಾವಿಯ ಮುಗ್ಧ ಮರಾಠಿಗರನ್ನು ಗಡಿ ಹಾಗೂ ಭಾಷೆ ಹೆಸರಿನಲ್ಲಿ ಪ್ರಚೋದಿಸುವ ಕೆಲಸ ಮಾಡುತ್ತಲೇ ಬಂದಿದೆ. ಈ ದಿನದಂದು ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದು ಪ್ರಚೋದನಾತ್ಮಕ ಭಾಷಣ ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದ ಅನೇಕ ಉದಾಹರಣೆಗಳಿವೆ. ಧೈರ್ಯಶೀಲ ಮಾನೆಯವರು ನ.1ರಂದು ಗಡಿ ವಿವಾದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಬೆಳಗಾವಿಗೆ ಬಂದು ಮರಾಠಿಗರನ್ನು ಪ್ರಚೋದಿಸುವ ಎಲ್ಲ ಸಾಧ್ಯತೆಗಳು ಇದ್ದ ಹಿನ್ನೆಲೆಯಲ್ಲಿ ಅವರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಈ ವಾಸ್ತವತೆಯನ್ನು ಮಾನೆಯವರು ತಮ್ಮಿಂದ ಮುಚ್ಚಿಟ್ಟಿದ್ದಾರೆ. ಇದು ಅವರು ಮಾಡಿದ ಅಪರಾಧ. ಸಭಾಧ್ಯಕ್ಷ ಪೀಠವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕ್ರಮವನ್ನು ಗಡಿ ಭಾಗದ ಕನ್ನಡ ಸಂಘಟನೆಗಳು ಸಂಪೂರ್ಣ ಬೆಂಬಲಿಸುವದಲ್ಲದೇ ಜಿಲ್ಲಾಧಿಕಾರಿಗಳ ಬೆನ್ನಿಗೆ ಗಟ್ಟಿಯಾಗಿ ನಿಲ್ಲತ್ತವೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದರು.