ಸಾರಾಂಶ
ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ಸಮಾಜದ ಶ್ರದ್ಧೆಯ ಜನಿವಾರವನ್ನು ವಿದ್ಯಾರ್ಥಿಗಳಿಂದ ತೆಗೆಸಿ ಕಸದ ಬುಟ್ಟಿಗೆ ಎಸೆದು ಕ್ರೌರ್ಯ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘ, ಜೈನ ಹಾಗೂ ಜಟ್ಟಿ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ಸಮಾಜದ ಶ್ರದ್ಧೆಯ ಜನಿವಾರವನ್ನು ವಿದ್ಯಾರ್ಥಿಗಳಿಂದ ತೆಗೆಸಿ ಕಸದ ಬುಟ್ಟಿಗೆ ಎಸೆಯುವುದರ ಮೂಲಕ ಕ್ರೌರ್ಯ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘ, ಜೈನ ಹಾಗೂ ಜಟ್ಟಿ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಮುಖಂಡರು, ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ, ಬೀದರ್, ಬೆಂಗಳೂರು ಜಿಲ್ಲೆಯ ಕೆಲವು ಶಾಲೆಗಳಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿದ್ದ ಜನಿವಾರ ತೆಗೆಸಿರುವುದು ಖಂಡನೀಯ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬಬೇಕಾದ ಅಧಿಕಾರಿಗಳು ದುರುದ್ದೇಶದಿಂದ ಕಾನೂನಿನಲ್ಲಿ ಇಲ್ಲದ್ದಿದ್ದರೂ ಪರೀಕ್ಷಾ ಕೇಂದ್ರದಲ್ಲಿ ಜನಿವಾರವನ್ನು ತೆಗೆಸಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡಿ ಜಾತಿನಿಂದನೆ ಮಾಡಿದ್ದಾರೆ.ಈ ರೀತಿಯ ದುರ್ವರ್ತನೆ ತೋರಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಅಲ್ಲದೇ ಸಿಇಟಿ ಪರೀಕ್ಷೆ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ಕಾರ್ಯದರ್ಶಿ ಸುರೇಶ್ ಎನ್.ಋಗ್ವೇದಿ, ಖಜಾಂಚಿ ಎಸ್.ಬಾಲಸುಬ್ರಮಣ್ಯಂ, ಸಂಘಟನಾ ಕಾರ್ಯದರ್ಶಿ ಎಚ್.ವಿ.ನಾಗರಾಜು, ಪದಾಧಿಕಾರಿಗಳಾದ ಸುನೀಲ್‌ಕುಮಾರ್, ಪ್ರತಾಪ್ ರೋಟಿಗರ್, ಚಂದ್ರು, ಮಮತಾ ಬಾಲಸುಬ್ರಹ್ಮಣ್ಯ, ಬಾಲು, ರಮೇಶ್, ಬೆಳ್ಳಿ, ಶಂಕರ್, ಶಾಂತಲಾ ಸೇರಿದಂತೆ ಇತರರಿದ್ದರು.