ವಿಶ್ವಗುರು ಬಸವಣ್ಣನವರ ವೈಕ್ತಿತ್ವದ ಕೀಳಾಗಿ ಬರೆದ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಗೌಡ ಅಮರಾಪುರ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು / ಸಿಂಧನೂರು
ವಿಶ್ವಗುರು ಬಸವಣ್ಣನವರ ವೈಕ್ತಿತ್ವದ ಕೀಳಾಗಿ ಬರೆದ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಗೌಡ ಅಮರಾಪುರ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಸೇರಿದಂತೆ ಅನೇಕ ಶರಣರು ಶ್ರಮಿಸಿದ್ದಾರೆ. ಆದರೆ ಕೆಲವರು ಬಸವಣ್ಣನವರ ವಿಚಾರಧಾರೆಗಳಿಗೆ ಮಸಿ ಬಳಿದು, ಇಲ್ಲಸಲ್ಲದ ಹೇಳಿಕೆ ಮತ್ತು ಬರಹ ಬರೆಯುತ್ತಿದ್ದಾರೆ. ಇದನ್ನು ಬಸವಾಭಿಮಾನಿಗಳು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಜಶೇಖರ ಪಾಟೀಲ್ ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನಕಾರಿ ರಚಿಸಿದ ಬಸವ ಮಂಟಪ ಪುಸ್ತಕವನ್ನು ಯಾವುದೇ ಕಾರಣಕ್ಕೂ ಹೊರಗೆ ತರಬಾರದು. ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಬಸವಕೇಂದ್ರದ ಉಪಾಧ್ಯಕ್ಷ ಬಸವಲಿಂಗಪ್ಪ ಬಾದರ್ಲಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ರಾಮನಗೌಡ ಮಲ್ಕಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ಬಸವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣಪ್ಪ ಸಾಹುಕಾರ ತುರ್ವಿಹಾಳ, ಬಸವಕೇಂದ್ರದ ಮುಖಂಡರಾದ ಹೆಚ್.ಜಿ.ಹಂಪಣ್ಣ, ಚಂದ್ರೇಗೌಡ ಹರಟೇನೂರು, ಕೃಷ್ಣ ಬಿ.ಎಂ, ಡಾ.ಶಿವಲಿಂಗಪ್ರಭು ಸುಂಕದ್, ಬಸವರಾಜಪ್ಪ ಕುರುಕುಂದಾ, ಶ್ಯಾಮ್ಸುಂದರ ಕೀರ್ತಿ, ಮಹಾದೇವಪ್ಪ ಚಿಂಚಿರಿಕಿ, ವೀರೇಶ ದಿದ್ದಿಗಿ, ವೀರನಗೌಡ ಭಾಗವಹಿಸಿದ್ದರು.
ಬಸವ ಸಂಘಟನೆಗಳಿಂದ ಇಂದು ಪ್ರತಿಭಟನೆ: ರಾಯಚೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ಸಮಾನತೆಯ ಹರಿಕಾರ ಮಹಾತ್ಮ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಬಸವ ಕೇಂದ್ರ ಹಾಗೂ ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳಿಂದ ನ.21 ಶನಿವಾರ ರಾಯಚೂರು ನಗರದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ರುದ್ರಪ್ಪ, ಶರಣಭೂಪಾಲ ನಾಡಗೌಡ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಗರದ ಬಸವ ವೃತ್ತದಲ್ಲಿ ಪ್ರತಿಭಟನೆ ಶನಿವಾರ ಬೆಳಗ್ಗೆ 9.30 ಕ್ಕೆ ನಡೆಯಲಿರುವ ಹೋರಾಟದಲ್ಲಿ ಬಸವ ಅನುಯಾಯಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ಮುಖಂಡರಾದ ನಾಗನಗೌಡ ಹರವಿ, ಜೆ. ಬಸವರಾಜ, ಚನ್ನಬಸವಣ್ಣ ಮಹಾಜನಶೆಟ್ಟಿ, ಕೆ. ಬಸವರಾಜಪ್ಪ ಸೇರಿದಂತೆ ಇತರರು ಇದ್ದರು.