ಸಾರಾಂಶ
ಕಂಪ್ಲಿ: ಸ್ಥಳೀಯ ಮಾರುಕಟ್ಟೆಯಲ್ಲಿ ಸತ್ತ ಕುರಿ, ಕೋಳಿಗಳ ಮಾಂಸ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪಟ್ಟಣದ ಮುಖಂಡರು ಬುಧವಾರ ಪಶು ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಯು. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.ಪುರಸಭೆ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಸ್ಥಳೀಯ ಮಾಂಸದ ಮಾರುಕಟ್ಟೆಯಲ್ಲಿ ಸತ್ತು ಹೋಗಿರುವ, ರೋಗಿಷ್ಟ ಕುರಿ, ದನದ ಮಾಂಸವನ್ನು ಬಹಿರಂಗವಾಗಿ ಮಾರುತ್ತಿದ್ದಾರೆ. ಇದನ್ನು ಸೇವಿಸುವುದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಗಮನ ಹರಿಸಿ ಸತ್ತ ಪ್ರಾಣಿಗಳ ಮಾಂಸ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಜತೆಗೆ ಉತ್ತಮ ಗುಣಮಟ್ಟದ ಮಾಂಸ ಮಾರಾಟ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರಿಯ ಪಶು ವೈದ್ಯ ಪರೀಕ್ಷಕ ಶಿವಪ್ಪ ವಿ.ದೇವಕ್ಕಿ, ಪ್ರಮುಖರಾದ ಜಿ.ರಾಮಣ್ಣ, ಡಾ.ಎ.ಸಿ. ದಾನಪ್ಪ, ಸಿ.ವೆಂಕಟೇಶ್, ಬಿ.ದೇವೇಂದ್ರ, ಕೆ.ಮಸ್ತಾನ್, ಬಿ.ಜಾಫರ್ ಇದ್ದರು.ಪಶು ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಯು. ಬಸವರಾಜ ಈ ಕುರಿತು ಪ್ರತಿಕ್ರಿಯಿಸಿ, ಪಟ್ಟಣ ಸೇರಿ ತಾಲೂಕಿನ ಎಲ್ಲ ಮಾಂಸ ಕಮಾಲ್‌ಗಳನ್ನು ಸ್ಥಳೀಯ ಆಡಳಿತ ಮತ್ತು ಪಶು ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಪರಿಶೀಲಿಸಲಾಗುವುದು. ಕಾನೂನು ಉಲ್ಲಂಘಿಸಿದ ಕಮಾಲ್ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.