ಸಾಮಾಜಿಕ ಅರಣ್ಯ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Jan 18 2025, 12:48 AM IST

ಸಾರಾಂಶ

Demand for action against social forest officer

-ಭ್ರಷ್ಟಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕೆಂದು ಕಾರ್ಮಿಕರ ಸಂಘದಿಂದ ತಹಸೀಲ್ದಾರರಿಗೆ ಮನವಿ

-----

ಕನ್ನಡಪ್ರಭ ವಾರ್ತೆ ಶಹಾಪುರ

ಸಾಮಾಜಿಕ ಅರಣ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಪಳಪ್ಪ ಅವರನ್ನು ಅಮಾನತುಗೊಳಿಸಬೇಕು ಹಾಗೂ ಬೋಗಸ್ ಕಾಮಗಾರಿಗಳ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ನಗರದ ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಅಣಬಿ ಮಾತನಾಡಿ, ಸಾಮಾಜಿಕ ಅರಣ್ಯ ವಲಯ ಶಹಾಪುರನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಪಳಪ್ಪ ಅವರು 2023-24 ನೇ ಸಾಲಿನಲ್ಲಿ ಆರ್.ಎಸ್.ಪಿ, ಎಸ್.ಎಫ್.ಪಿ.ಎಸ್.ಎಫ್ ಯೋಜನೆಯಡಿ ರಸ್ತೆ ಬದಿ ನಡೆತೋಪು ಕಾಮಗಾರಿಯ ಸ್ಥಳದಲ್ಲಿ ಅಳವಡಿಸಲಾದ ನಾಮಫಲಕದಲ್ಲಿ ಕಾಮಗಾರಿಯ ಅಂದಾಜು ಮೊತ್ತ ಹಾಕದೆ, ಇಲಾಖೆ ಯೋಜನೆಗಳನ್ನು ಗೌಪ್ಯವಾಗಿಟ್ಟು ಸಾರ್ವಜನಿಕರಿಗೆ ಮಾಹಿತಿ ಸಿಗದಂತೆ ಮಾಡಿ, ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದರು.

ಈ ಕುರಿತು ಮಾಹಿತಿ ಕೇಳಿದರೆ ಅಧಿಕಾರಿ ಉಡಾಫೆ ಉತ್ತರ ನೀಡುತ್ತಾರೆ. ನೆಟ್ಟ ಗಿಡಗಳ ಪಾಲನೆ ಪೋಷಣೆ ಮಾಡದೆ, ಗಿಡಗಳು ಒಣಗಿ ಹೋಗಿದ್ದು, ಕಾಮಗಾರಿಗಳಲ್ಲಿ ನಕಲಿ ಕಾವಲುಗಾರರ ಯಾದಿ ಸೃಷ್ಟಿಸಿ ಅವರ ಹೆಸರಿನಲ್ಲಿ ಲಕ್ಷಾಂತರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಗಿಡ ಬೆಳೆಸುವ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರುತ್ತಿರುವುದು ತಿಳಿದು ಬಂದಿದೆ. ತಕ್ಷಣ ಮೇಲಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮೌನೇಶ್ ಬೀರನೂರ್, ಭೋಜಪ್ಪ ಮುಂಡಾಸ್, ಅಂಬರೀಶ್ ಶಿರಿವಳ, ಶೇಖರ್ ಕಟ್ಟಿಮನಿ, ದೇವೇಂದ್ರಪ್ಪ ರಸ್ತಾಪುರ, ದೇವಪ್ಪ ಫಿಲ್ಟರ್ ಬೆಡ್, ದಶವಂತ ಕನಗನಹಳ್ಳಿ, ಮಹಾಂತೇಶ್ ನಾಯ್ಕೋಡಿ ಇದ್ದರು.

--- ಬಾಕ್ಸ್ ---

* ಕಾಮಗಾರಿಯ ವಿವರ

1. ವಿಭೂತಿಹಳ್ಳಿ - ಹತ್ತಿಗೂಡೂರು ರಸ್ತೆ ಬದಿ ನಡೆತೋಪು

2. ಹಾಲಬಾವಿ ಕ್ರಾಸ್‌ದಿಂದ ಮೊರಾರ್ಜಿ ದೇಸಾಯಿ ಶಾಲೆ ಮುಖ್ಯ ಕಾಲುವೆ ರಸ್ತೆ ಬದಿ ನಡೆತೋಪು

3. ಭೀ.ಗುಡಿ ಕ್ರಾಸ್‌ನಿಂದ - ಹಾಲಭಾವಿ ಕ್ರಾಸ್ ಮುಖ್ಯ ಕಾಲುವೆ ರಸ್ತೆ ಬದಿ ನಡೆತೋಪು

4. ಟಿ.ವಡಗೇರಾ - ಹಯ್ಯಾಳ ಕೆ. ರಸ್ತೆ ವಬದಿ ನಡೆತೋಪು

5. ಗುಂಡಳ್ಳಿ ಸರ್ವೇ ನಂಬರ 121ರಲ್ಲಿ ನಡೆತೋಪು

----

17ವೈಡಿಆರ್8:

ಶಹಾಪುರ ನಗರದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಭ್ರಷ್ಟಅಧಿಕಾರಿ ಉಪಳಪ್ಪ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.