ಸಾರಾಂಶ
ಗೋಕರ್ಣ: ಗಂಗಾವಳಿಯ ಸರ್ಕಾರಿ ಉರ್ದು ಶಾಲೆಯ ಪಕ್ಕದಲ್ಲಿ ತ್ಯಾಜ್ಯ ನೀರಿನಿಂದ ತೊಂದರೆಯಾಗುತ್ತಿದ್ದು, ಗ್ರಾಪಂ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು ಎಂದು ಪಾಲಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯರು ಪಟ್ಟು ಹಿಡಿದ ಘಟನೆ ಸೋಮವಾರ ನಡೆಯಿತು.
ಮೂರು ವರ್ಷಗಳಿಂದ ಶಾಲೆಯ ಪಕ್ಕದಲ್ಲಿ ಇರುವ ಮನೆಯವರು ಹೊಲಸು ನೀರು ಬಿಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹೊಲಸು ವಾಸನೆ ಬರುತ್ತಿದೆ. ಅಲ್ಲದೆ ಸೊಳ್ಳೆ ಕಾಟ ಹೆಚ್ಚಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ. ತ್ಯಾಜ್ಯ ನೀರು ಬಿಡದಂತೆ ತಿಳಿ ಹೇಳಲು ಹೋದರೆ ಕೆಟ್ಟದಾಗಿ ಮಾತನಾಡುತ್ತಾರೆ. ಅಧಿಕಾರಿಗಳು ಬಂದರೆ ಸರಿಪಡಿಸುತ್ತೇವೆ ಎಂದು ಹೇಳಿ, ಆನಂತರ ಪುನಃ ಮೊದಲಿನಂತೆ ವರ್ತಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಅಧ್ಯಕ್ಷ ಈಶ್ವರ ಗೌಡ ಹಾಗೂ ಪಿಡಿಒ ವಿನಾಯಕ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯ ನೀರನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಶಾಲೆ ಹತ್ತಿರವಿರುವ ಮನೆಯವರಿಗೆ ತಿಳಿಸಿ, ಒಂದು ದಿನದೊಳಗೆ ಸರಿಪಡಿಸದಿದ್ದರೆ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿದರು.
ಈ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೌಕತ್ ಸಾಬ್ ಮಾತನಾಡಿ, ಶೌಚಾಲಯದ ನೀರು ಬಿಡುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪಂಚಾಯಿತಿಗೆ ತಿಳಿಸಿದ್ದೇವೆ. ಇದಕ್ಕೆ ಶಾಶ್ವತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.ಪಾಲಕ ಹಸನ್ ಸಾಬ್ ಮಾತನಾಡಿ, ಪ್ರತಿ ಬಾರಿ ಅಧಿಕಾರಿಗಳನ್ನು ಕರೆಸಿದಾಗ ಸರಿಪಡಿಸುತ್ತೇವೆ ಎನ್ನುತ್ತಾರೆ. ಆನಂತರ ಪೈಪ್ ತೆಗೆದು ನೀರು ಬಿಡುತ್ತಾರೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮತ್ತೆ ಇದೇ ರೀತಿ ಮಾಡಿದರೆ ಮಕ್ಕಳನ್ನು ಶಾಲಾ ಆವಾರದಲ್ಲಿ ತಂದು ಪಾಠ ಮಾಡಲು ಕೋರುತ್ತೇವೆ. ಮಕ್ಕಳಿಗೆ ರೋಗರುಜಿನ ಹರಡಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೆ ಹೊಣೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಸಾಬ್ ಮಾತನಾಡಿ, ಪಂಚಾಯಿತಿಯಿಂದ ಇಂಗುಗುಂಡಿ ನಿರ್ಮಾಣಕ್ಕೆ ಹಣ ಮಂಜೂರಿ ಮಾಡಿಕೊಟ್ಟಿದ್ದರೂ ಹೊಲಸು ನೀರು ಶಾಲೆಯ ಹತ್ತಿರ ಬಿಡುತ್ತಿದ್ದಾರೆ. ಸರ್ಕಾರದ ಅನುದಾನ ಕಡಿತಗೊಳಿಸಿ ಕ್ರಮ ಜರುಗಿಸಬೇಕು ಎಂದರು.ಈ ವೇಳೆ ಜುಬೇರ ಅಲಿ ಸಾಬ್, ಹ್ಯಾರಿಸ್, ಇರ್ಷಾದ ಜಲಿಲ್, ರಜಾಕ್ ಉಪಸ್ಥಿತರಿದ್ದರು.