ಸಾರಾಂಶ
ಬ್ಯಾಡಗಿ: ನೂತನ ರೈಲ್ವೇ ನಿಲ್ದಾಣ ಕಳಪೆ ಕಾಮಗಾರಿಯಿಂದ ಕೂಡಿದ್ದು, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಮೋಟೆಬೆನ್ನೂರ ರೈಲ್ವೆ ಸುಧಾರಣ ಸಮಿತಿ ಸದಸ್ಯರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಿದ ಅಧ್ಯಕ್ಷ ಬಸವರಾಜ ಬಳ್ಳಾರಿ, ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಪಟ್ಟಣಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ರೈಲು ನಿಲ್ದಾಣ ಮೂಲಕ ಪ್ರಯಾಣಿಸುತ್ತಾರೆ. ಇತ್ತೀಚೆಗೆ ಹಳೇ ನಿಲ್ದಾಣ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸುಮಾರು 48 ಕೋಟಿ ವೆಚ್ಚದಲ್ಲಿ ಹೊಸ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ನಿಲ್ದಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಟ್ಟಡ ಮಳೆಗಾಲದಲ್ಲಿ ಸೋರುತ್ತದೆ, ಇದರೊಟ್ಟಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕೂಡಲೇ ಈ ಕುರಿತಂತೆ ಮಾಹಿತಿ ಪಡೆದು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು. ನಿಲ್ದಾಣ ಪಕ್ಕದಲ್ಲಿ ನಿರ್ಮಿಸಿರುವ ಮೇಲು ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿ ಸಹ ಕಳಪೆಯಾಗಿದ್ದು, ಮೇಲು ಸೇತುವೆ ಮೇಲೆ ಗುತ್ತಿಗೆದಾರ ಮಾಡಿದ ಯಡವಟ್ಟಿನಿಂದ ತಗ್ಗುಗಳು ಬಿದ್ದು ಅಪಘಾತ ಉಂಟಾಗಿ ವಾಹನ ಸವಾರರು ಗಾಯಗೊಂಡ ಘಟನೆಗಳು ನಡೆದಿವೆ, ಕೆಳ ಸೇತುವೆ ಸಹ ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು ಸಣ್ಣ ಪುಟ್ಟ ವಾಹನಗಳು ಸಹ ಸಂಚರಿಸಲು ಪರದಾಡುವಂತಾಗಿದೆ. ಇದರೊಟ್ಟಿಗೆ ವೇಗದೂತ ರೈಲುಗಳನ್ನ ನಿಲ್ದಾಣದಲ್ಲಿ ನಿಲ್ಲಿಸಿದಲ್ಲಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಸುಧಾರಣ ಸಮಿತಿ ಗೌರವಾಧ್ಯಕ್ಷ ಸುರೇಶ ಯತ್ನಳ್ಳಿ ಸೇರಿದಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಜಾನ್‌ಪುನಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.